ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ನಿನ್ನೆ ಬಿಡುಗಡೆ ಆಗಿದೆ. ಸಿನಿಮಾ ಮೊದಲ ದಿನವೇ 8.50 ಕೋಟಿ ಗಳಿಕೆ ಮಾಡಿದ್ದು ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದ ಕಲೆಕ್ಷನ್ ಎರಡನೇ ದಿನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ‘ಮ್ಯಾಕ್ಸ್’ ಸಿನಿಮಾಕ್ಕೆ ಮೊದಲ ದಿನ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಸುದೀಪ್ ಅವರ ನಿವಾಸದಲ್ಲಿ ‘ಮ್ಯಾಕ್ಸ್’ ಚಿತ್ರತಂಡದ ಜೊತೆಗೆ ಸಂಭ್ರಮ ಆಚರಿಸಲಾಗಿದೆ. ಈ ಸಂಭ್ರಮಾಚರಣೆ ವೇಳೆ ಸುದೀಪ್ ಕತ್ತರಿಸಿದ ಕೇಕ್ ಒಂದರ ಫೋಟೊ ಇದೀಗ ವೈರಲ್ ಆಗುತ್ತಿದೆ.
ಅಸಲಿಗೆ ಇದೇ ಸಮಯದಲ್ಲಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ ಕಾರಣ ಚಿತ್ರೀಕರಣ ನಡೆಯಲಿಲ್ಲ. ‘ಡೆವಿಲ್’ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಸರಿಯಾಗಿ ಈಗ ಸುದೀಪ್ರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿದೆ. ಮಾತ್ರವಲ್ಲದೆ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿರುವ ಜೊತೆಗೆ ದೊಡ್ಡ ಮಟ್ಟದ ಭರವಸೆಯನ್ನೂ ಸಹ ಮೂಡಿಸಿದೆ. ಈ ಕಾರಣಕ್ಕಾಗಿ ‘ಮ್ಯಾಕ್ಸ್’ ಚಿತ್ರತಂಡ ಇಂಥಹಾ ಕೇಕ್ ಒಂದನ್ನು ಕತ್ತರಿಸಿದೆ ಎನ್ನಲಾಗುತ್ತಿದೆ.