ಬೆಂಗಳೂರು : ರಾಜ್ಯದಲ್ಲಿ ಬರದಿಂದ ರೈತರು ಕಂಗಾಲಾಗಿದ್ದಾರೆ. ಬರಗಾಲಕ್ಕೆ ಹಣ ಬಿಡುಗಡೆ ಮಾಡಿಲ್ಲ. ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಅವರು, ರೈತರಿಗೆ ಬೆಳೆ ಇಲ್ಲ, ಕುಡಿಯುವ ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಸರ್ಕಾರ ಇದುವರೆಗೂ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕೇಂದ್ರದ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಿಂದೆ ಪ್ರವಾಹ ಬಂದಾಗ ನಾವು ಒಂದು ತಿಂಗಳಲ್ಲಿ ಡಿಬಿಟಿ ಮುಖಾಂತರ ರೈತರಿಗೆ ಸುಮಾರು 2000 ಕೋಟಿ ರೂ. ಬಿಡುಗಡೆ ಮಾಡಿದ್ದೆವು. ಅವರು ಕೇವಲ 2000 ಸಾವಿರ ನೀಡುತ್ತೇನೆ ಎನ್ನುತ್ತಾರೆ. ಇದು ರೈತರಿಗೆ ಅವಮಾನ ಮಾಡಿದಂತೆ ಎಂದರು. ಕೇಂದ್ರದ ನಿಯಮಂತಾದರೂ ಒಣ ಬೇಸಾಯಕ್ಕೆ ಪ್ರತಿ ಹೆಕ್ಟೇರ್ ಗೆ ಕನಿಷ್ಟ 6000 ರೂ, ನೀರಾವರಿಗೆ 18 ಸಾವಿರ ರೂ. ನೀಡುವ ಕೆಲಸ ಮಾಡಬೇಕು. ನಾವು ರೈತರಿಗೆ ಕಿಸಾನ್ ಸಮ್ಮಾನ್ ನೀಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ರೈತರಿಂದ ಸಾಲ ವಸೂಲಿ ನಿಲ್ಲಿಸಬೇಕು. ಕೂಡಲೆ ಹೊಸ ಸಾಲ ನೀಡುವ ವ್ಯವಸ್ಥೆ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬಸವರಾಜು ಬೊಮ್ಮಾಯಿ ಹೇಳಿದರು.