ಸಚಿವ ಶಿವಾನಂದ ಪಾಟೀಲ್ ಮತ್ತು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ನಡುವಿನ ರಾಜಕೀಯ ಜಂಗೀಕುಸ್ತಿ ತಾರಕಕ್ಕೆ ಏರಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಸ್ಪರ್ಧೆ ಮಾಡುವಂತೆ ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ್ದ ಬಹಿರಂಗ ಸವಾಲ್ಗೆ ಸಚಿವ ಶಿವಾನಂದ ಪಾಟೀಲ್ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದರು.
ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಷರತ್ತುಬದ್ದ ರಾಜೀನಾಮೆ ನೀಡಿದ್ದರು. ಸ್ಪೀಕರ್ ಯುಟಿ ಖಾದರ್ ಅವರಿಗೆ ಖುದ್ದಾಗಿ ನೀಡಿದ್ದರು. ಇದು ಇಂದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಸಚಿವ ಶಿವಾನಂದ ಪಾಟೀಲ್ ಸಲ್ಲಿಸಿದ್ದ ರಾಜೀನಾಮೆ ಪತ್ರ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಯುಟಿ ಖಾದರ್, ಅದನ್ನು ತಿರಸ್ಕಾರ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಉತ್ತರನ ಪೌರುಷ ಒಲೆಯ ಮುಂದೆ ಎಂದು ಲೇವಡಿ ಮಾಡಿದ್ದಾರೆ.
ರಾಜೀನಾಮೆ ಅಂಗೀಕಾರ ಆಗೋದಿಲ್ಲ ಅಂತ ಗೊತ್ತಿದ್ದರೂ ಪುಕ್ಕಟೆ ಪ್ರಚಾರಕ್ಕೆ ರಾಜೀನಾಮೆ ಕೊಟ್ಟು ರಾಜೀನಾಮೆಯನ್ನು ತಿರಸ್ಕೃತವಾಗುವಂತ ಪ್ರಭೃತಿಗಳು ಇದ್ದಾರೆ ಎಂಬುದೇ ಸೋಜಿಗದ ಸಂಗತಿ. ಶಾಸಕರು ರಾಜೀನಾಮೆ ಕೊಡುವುದಕ್ಕೆ ರೀತಿ ರಿವಾಜು ಇರುತ್ತೆ ಎಂಬುದು ಇವರಿಗೆ ಗೊತ್ತಿಲ್ಲವೇ. ಇವರು ರಾಜೀನಾಮೆ ಕೊಡುವುದು, ಸಭಾಧ್ಯಕ್ಷರು ತಿರಸ್ಕರಿಸುವ ಬೃಹನ್ನಾಟಕ ಸಂಪನ್ನವಾಯಿತು ಎಂದು ಎಕ್ಸ್ ನಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್ ಮಾಡಿದ್ದಾರೆ.
ಸಚಿವ ಸಂಪುಟದ ಹಿರಿಯ ಸಚಿವರೊಬ್ಬರು ಈ ರೀತಿಯಾದ ರಾಜಕೀಯ ನಾಟಕವಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜೀನಾಮೆ ಸರಿಯಾದ ವಿಧಾನದಲ್ಲಿಲ್ಲ. ಇಂತಹ ರಾಜೀನಾಮೆ ಪತ್ರ ಸ್ವೀಕೃತವಾಗುವುದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ಅವರಿಂದ ರಿಸೈನ್ ಲೆಟರ್ ಸ್ವೀಕರಿಸುವ ವೇಳೆಯಲ್ಲೇ ಖಾದರ್ ಅವರು ಹೇಳಬೇಕಾಗಿತ್ತು.
ನೀವು ಮಾಡುತ್ತಿರುವ ನಾಟಕವನ್ನು ಪ್ರಜ್ಞಾವಂತ ಮತದಾರರು, ಕ್ಷೇತ್ರದ ಜನತೆ ಗಮನಿಸಿ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎಂಬುದನ್ನು ಮರೆಯದಿರಿ ಎಂದು ಶಿವಾನಂದ ಪಾಟೀಲ್ ಜೊತೆಗೆ ಸ್ಪೀಕರ್ ಖಾದರ್ ಅವರನ್ನು ಯತ್ನಾಳ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಇವರಿಗೆ ನಿಜಕ್ಕೂ ತಾಕತ್ತಿದ್ದರೆ ಸರಿಯಾದ ರೀತಿಯಲ್ಲಿ ರಾಜೀನಾಮೆ ಕೊಟ್ಟು ಅಸಲಿ ಹೋರಾಟಕ್ಕೆ ಸಜ್ಜಾಗಲಿ ಎಂದು ಸಚಿವ ಶಿವಾನಂದ ಪಾಟೀಲ್ ಗೆ ಮತ್ತೊಮ್ಮೆ ಸವಾಲ್ ಹಾಕಿದ್ದಾರೆ