ಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನ ಕಾಂಗ್ರೆಸ್ ಆಯ್ಕೆ ಮಾಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಆಕ್ರೋಶ ಕಾರಣವಾಗಿದೆ.ಇದೀಗ ಬಾನು ಮುಷ್ತಾಕ್ ಅವರ ಆಹ್ವಾನ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ, ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ.
ಈ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದೆ. ಮೈಸೂರಿನ ರಾಜಮನೆತನದವರೂ ಸರ್ಕಾರದ ನಡೆ ವಿರೋಧಿಸಿದ್ದಾರೆ. ಆದರೂ ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟು ಮಾಡಿದ್ದಾರೆ. ಹೀಗಾಗಿ ಬಾನು ಮುಷ್ತಾಕ್ ಅವರಿಗೆ ನೀಡಿದ ಆಹ್ವಾನ ಹಿಂಪಡೆಯುವಂತೆ ನಿರ್ದೇಶಿಸಲು ಮನವಿ ಮಾಡಿದ್ದಾರೆ.