ಬೆಂಗಳೂರು: ಆಕಾಶವಾಣಿ, ದೂರದರ್ಶನದಲ್ಲಿ ಬಂಜಾರ ಭಾಷೆಯ ಕಾರ್ಯಕ್ರಮಗಳನ್ನು ಬಿತ್ತರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್.ಗೋವಿಂದಸ್ವಾಮಿ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಅಕಾಡೆಮಿ ಅಧ್ಯಕ್ಷರು, ಬಂಜಾರ ಭಾಷೆ ಭಾರತ ದೇಶದ ಪ್ರತಿ ರಾಜ್ಯದಲ್ಲೂ ಮತ್ತು ವಿಶ್ವದ 112 ಕ್ಕೂ ಹೆಚ್ಚು ದೇಶಗಳು ಒಳಗೊಂಡ ಹಾಗೆ ಪಸರಿಸಿದೆ. ಈ ಭಾಷೆಯನ್ನು ಮಾತನಾಡುವ ಜನ ಬೃಹತ್ ಸಂಖ್ಯೆಯಲ್ಲಿ ಮತ್ತು ಬಂಜಾರ ಸಂಸ್ಕೃತಿಯನ್ನು ಪ್ರತಿನಿಧಿಸುವ ಜನ ಇದ್ದಾರೆ. ಇಂತಹ ಬೃಹತ್ ಶ್ರೀಮಂತ ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿರುವ ಬುಡಕಟ್ಟು ಬಂಜಾರ ಪ್ರಸ್ತುತ ಜನಾಂಗ ಪ್ರಸ್ತುತ ಸಂದರ್ಭದಲ್ಲಿ ಈ ಭಾಷೆಯಿಂದ ವಂಚಿತರಾಗುತ್ತಿದ್ದಾರೆ. ಭಾಷೆ ನಶಿಸಿ ಹೋಗುತ್ತಿದೆ. ಬಂಜಾರರ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಹೀಗಾಗಿ ಬಂಜಾರ ಭಾಷೆ ಬೆಳವಣಿಗೆಯ ಹಿತ ದೃಷ್ಟಿಯಿಂದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಅಧೀನದಲ್ಲಿ ಬರುವ ಆಕಾಶವಾಣಿ, ದೂರದರ್ಶನದಲ್ಲಿ ಬಂಜಾರ ಭಾಷೆಯ ಕಾರ್ಯಕ್ರಮವನ್ನು ಬಿತ್ತರಿಸುವ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷೆಯನ್ನು ದೇಶದಲ್ಲಿ ಪಸರಿಸಲು ಮತ್ತು ಬೆಳೆಸಲು ಸಂಬಂಧಪಟ್ಟವರಿಗೆ ಸೂಚಿಸುವಂತೆ ಡಾ. ಎ.ಆರ್.ಗೋವಿಂದಸ್ವಾಮಿ ಅವರು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ತಾವು ಕಟ್ಟಿರುವ ಬಂಜಾರ ಮ್ಯೂಸಿಯಂ ರೀತಿಯಲ್ಲಿಯೇ ಕರ್ನಾಟಕದಲ್ಲೂ ಒಂದು ಬೃಹತ್ ಮ್ಯೂಸಿಯಂ ಅಥವಾ ಬುಡಕಟ್ಟು ಮ್ಯೂಸಿಯಂ, ಮಾದರಿ ತಾಂಡ ನಿರ್ಮಿಸಲು ನಾವು ಉತ್ಸುಕರಾಗಿದ್ದೇವೆ.. ತಮಗೆ ಬುಡಕಟ್ಟು ಜನರ ಬಗ್ಗೆ ಹೆಚ್ಚಿನ ಪ್ರೀತಿ ಇದೆ. ತಮ್ಮ ರಾಜ್ಯ ಗುಜರಾತ್ನಲ್ಲಿಯೂ ಮತ್ತು ದೇಶದೆಲ್ಲೆಡೆ ನಮ್ಮ ಬಂಜಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ತಮಗೆ ಪ್ರೋತ್ಸಾಹವಾಗಿ ನಿಂತಿದ್ದಾರೆ. ಹೀಗಾಗಿ ಈ ಜನಾಂಗಕ್ಕೆ ನಿಮ್ಮ ಮೇಲೆ ಪ್ರೀತಿ ಇರುವುದರಿಂದ ತಮ್ಮಿಂದ ಈ ಜನಾಂಗ ಇನ್ನು ಸಾಕಷ್ಟು ನಿರೀಕ್ಷಿಸುತ್ತಿದೆ. ಹೀಗಾಗಿ ತಾವುಗಳು ಕರ್ನಾಟಕದಲ್ಲಿ ಬಂಜಾರ ಭಾಷೆ, ಸಂಸ್ಕೃತಿಯನ್ನು ಉಳಿಸಲು-ಬೆಳಸಲು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಯಲು ಸಹಾಯ ಸಹಕಾರವನ್ನು ಕೊಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್.ಗೋವಿಂದಸ್ವಾಮಿ ಮನವಿ ಮಾಡಿದ್ದಾರೆ.