Wednesday, January 28, 2026
20.2 C
Bengaluru
Google search engine
LIVE
ಮನೆರಾಜ್ಯನಮ್ಮ ಮೆಟ್ರೋ 108 ಅವಾಂತರ: ಪ್ರಶ್ನಿಸಿದ್ರೆ ಸಿಡಿದು ಬೀಳ್ತಾರೆ ಸಿಬ್ಬಂದಿ!

ನಮ್ಮ ಮೆಟ್ರೋ 108 ಅವಾಂತರ: ಪ್ರಶ್ನಿಸಿದ್ರೆ ಸಿಡಿದು ಬೀಳ್ತಾರೆ ಸಿಬ್ಬಂದಿ!

ಬೆಂಗಳೂರು : ಬೆಂಗಳೂರು ಟ್ರಾಫಿಕ್ ದಟ್ಟಣೆಗೆ ಪರಿಹಾರವೆಂಬಂತೆ ಬಂದ ನಮ್ಮ ಮೆಟ್ರೋ ಜನರಿಗೆ ಒಂದಷ್ಟು ರಿಲೀಫ್ ನೀಡಿದೆಯಾದರೂ ಇತ್ತೀಚೆಗೆ ಯಾಕೋ ವ್ಯವಸ್ಥೆ ಸ್ವಲ್ಪ ಹಳಿ ತಪ್ಪಿದಂತೆ ಕಾಣುತ್ತಿದೆ. ಮೆಟ್ರೋ ಕಾರ್ಯಾಚರಣೆಯಲ್ಲಿ ಆಗಾಗ ಎಡವಟ್ಟುಗಳು ಆಗುತ್ತಲೇ ಇವೆ.

ಇತ್ತೀಚೆಗೆ ವೈಟ್ ಫೀಲ್ಡ್ ನಲ್ಲಿ ಮೆಟ್ರೋ ಕಾರ್ಯಾಚರಣೆ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ಪರದಾಡಿದ್ದು ಗೊತ್ತೇ ಇದೆ. ಇದಾದ ಬಳಿಕವೂ ನಮ್ಮ ಮೆಟ್ರೋ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಂಡುಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಎಲ್ಲೆಂದರಲ್ಲಿ ನಿಂತು ಬಿಡುತ್ತಿದೆ. ಇವತ್ತು ಚೆಲ್ಲಘಟ್ಟ-ವೈಟ್ ಫೀಲ್ಡ್ ಮಾರ್ಗವಾಗಿ ಸಂಚರಿಸುತ್ತಿದ್ದ ನೇರಳೆ ಲೈನ್ ಮೆಟ್ರೋ ರೈಲು ಮೈಸೂರು ರಸ್ತೆ ನಿಲ್ದಾಣ ತಲುಪುವ ಮುನ್ನ ಮಾರ್ಗ ಮಧ್ಯೆಯೇ ಕೆಲ ನಿಮಿಷಗಳ ಕಾಲ ನಿಂತು ಬಿಟ್ಟಿತ್ತು. ಅದೇ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಬಿಟ್ಟ ನಂತರ ಮೆಜೆಸ್ಟಿಕ್, ನಿಲ್ದಾಣ ತಲುಪುವ ಮುನ್ನ ಸುರಂಗ ಮಾರ್ಗದಲ್ಲೇ ಕೆಲ ನಿಮಿಷಗಳವರೆಗೆ ನಿಂತಿತ್ತು. ಬೆಳಿಗ್ಗೆ 10.17ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ ಬಂದು ತಲುಪಿತ್ತು.

ನಮ್ಮ ಮೆಟ್ರೋ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಯಾಣಿಕರು ಇತ್ತೀಚೆಗೆ ರೈಲುಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು. ಕೆಲವೇ ಸೆಕೆಂಡುಗಳು ಮಾತ್ರ ನಿಲ್ದಾಣಗಳಲ್ಲಿ ನಿಲ್ಲಬೇಕಾದ ನಮ್ಮ ಮೆಟ್ರೋ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವು ನಿಲ್ದಾಣಗಳಲ್ಲಿ 5 ನಿಮಿಷಗಳವರೆಗೆ ನಿಲ್ಲುತ್ತಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸರಿಯಾದ ಸಮಯಕ್ಕೆ ಕಛೇರಿಗೆ ತಲುಪಬೇಕಾದ ಸಿಬ್ಬಂದಿ ಇದರಿಂದ ತಡವಾಗಿ ತಲುಪುವಂತಾಗುತ್ತಿದೆ. ಸಮಯ ನಿರ್ವಹಣೆಗೆ ಅನುಕೂಲವಾಗಿದ್ದರಿಂದ ಬಸ್, ಕಾರಿನ ಬದಲು ನಮ್ಮ ಮೆಟ್ರೋಗೆ ಮೊರೆ ಹೋಗಿದ್ದ ಪ್ರಯಾಣಿಕರಿಗೆ ತೀವ್ರ ಕಿರಿಕಿರಿಯಾಗುತ್ತಿದೆ.

ಇದಲ್ಲದೆ ಬೆಳಿಗ್ಗೆ ಮತ್ತು ಸಂಜೆ ವೇಳೆ( ಪೀಕ್ ಅವರ್) ನಮ್ಮ ಮೆಟ್ರೋ ರೈಲುಗಳಲ್ಲಿ ಜನರನ್ನು ಕುರಿಗಳು ತುಂಬಿಸುವಂತೆ ಸಿಬ್ಬಂದಿ ತುಂಬಿಸುತ್ತಿದ್ದಾರೆ. ಇದರಿಂದ ಮಹಿಳಾ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲವಡೆ ಸಹ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಘಟನೆಗಳು ವರದಿಯಾಗುತ್ತಿವೆ. ಇಷ್ಟೆಲ್ಲಾ ಅವಾಂತರಗಳನ್ನು ಪ್ರಜ್ಞಾವಂತರು ವಿಡಿಯೋ ಮಾಡುವ ಮೂಲಕ ಬಹಿರಂಗಗೊಳಿಸಲು ಯತ್ನಿಸಿದರೆ, ಅಲ್ಲಿರುವ ಸಿಬ್ಬಂದಿ ಮೊಬೈಲ್ ಕಸಿದುಕೊಳ್ಳಲು ಓಡಿ ಬರುತ್ತಾರೆ. ಅವ್ಯವಸ್ಥೆ ಯಾರಿಗೂ ಗೊತ್ತಾಗದ ಹಾಗೆ ಮುಚ್ಚಿಹಾಕಲು ಸಿಬ್ಬಂದಿ ಯತ್ನಿಸುತ್ತಿದ್ದಾರೋ, ಅಥವಾ ಈ ಸಂಬಂಧ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳ ನಿರ್ದೇಶನವಿದೆಯೋ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಕೂಡಲೇ ಮೇಲಾಧಿಕಾರಿಗಳು ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಮ್ಮ ಮೆಟ್ರೋಗೆ ಅಪಖ್ಯಾತಿ ಬರುವುದಂತೂ ನಿಶ್ಚಿತ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments