Thursday, January 29, 2026
26.8 C
Bengaluru
Google search engine
LIVE
ಮನೆ#Exclusive NewsTop Newsಮರಗಳ ಮಾರಣ ಹೋಮ ಆರೋಪ: ನಮ್ಮ ಮೆಟ್ರೋ ವಿರುದ್ಧ ಪರಿಸರ ಪ್ರೇಮಿಗಳ ಹೋರಾಟಗಾರರ ಆಕ್ರೋಶ

ಮರಗಳ ಮಾರಣ ಹೋಮ ಆರೋಪ: ನಮ್ಮ ಮೆಟ್ರೋ ವಿರುದ್ಧ ಪರಿಸರ ಪ್ರೇಮಿಗಳ ಹೋರಾಟಗಾರರ ಆಕ್ರೋಶ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಯ ಹೆಸರಿನಲ್ಲಿ ನೂರಾರು ಮರಗಳ ಮಾರಣಹೋಮ ಮಾಡಲಾಗಿದೆ. ಇದರಿಂದ ಈ ವರ್ಷ ಬೆಂಗಳೂರಿನಲ್ಲಿ ಜನರು ಬಿಸಿಲ ಬೇಗೆಯಲ್ಲಿ ತತ್ತರಿಸಿ ಹೋಗಿದ್ದಾರೆ. ಇದೀಗ ಮತ್ತೆ ನಗರದಲ್ಲಿರುವ ಸಾವಿರಾರು ಮರಗಳನ್ನು ಕಡಿಯಲು ಬಿಎಂಆರ್​​ಸಿಎಲ್ ಸಿದ್ಧತೆ ಆಗಿದೆ ಎಂಬ ಆರೋಪ ಕೇಳಿಬಂದಿದೆ.

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗಾಗಿ ಬರೋಬ್ಬರಿ 11,137 ಮರಗಳನ್ನು ಕಡಿಯಲು ಮತ್ತು ಸ್ಥಳಾಂತರಿಸಲು ತಿರ್ಮಾನ ಮಾಡಲಾಗಿದೆ. 1ನೇ ಕಾರಿಡಾರ್​​ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿಲೋ ಮೀಟರ್​ ಮಾರ್ಗದಲ್ಲಿ 21 ನಿಲ್ದಾಣಗಳಿರಲಿವೆ. 2ನೇ ಕಾರಿಡಾರ್​​ ಹೊಸಹಳ್ಳಿಯಿಂದ ಕಡಬಗೆರೆಯ ವರೆಗೆ 12.50 ಕಿಲೋ ಮೀಟರ್ ಇದ್ದು, 9 ನಿಲ್ದಾಣಗಳು ಇರಲಿವೆ. ಒಟ್ಟು 44.65 ಕಿ.ಮೀ ಉದ್ದವಿರುವ ಎರಡು ಮೆಟ್ರೋ ಮಾರ್ಗ ಇರಲಿವೆ. 15,611 ಕೋಟಿ ರೂ. ವೆಚ್ಚದಲ್ಲಿ ಎರಡು ಮಾರ್ಗದ ಕಾಮಗಾರಿ ನಡೆಯಲಿದೆ.

ಬಿಎಂಆರ್​ಸಿಎಲ್ ಹೇಳುವುದೇನು?

ಅಷ್ಟೊಂದು ಮರಗಳನ್ನು ಕಡಿಯುವುದಿಲ್ಲ. 11,137 ಮರಗಳು ಮೂರನೇ ಹಂತದ ಕಾಮಗಾರಿ ಜಾಗದಲ್ಲಿ ಬರುತ್ತವೆ ಎಂಬುದಷ್ಟೇ ಮಾಹಿತಿ. ಅದರ ಅರ್ಥ ಅವುಗಳನ್ನೆಲ್ಲ ಕಡಿಯುತ್ತೇವೆ ಎಂದಲ್ಲ. ಲೆಕ್ಕ ಹಾಕಲಾಗಿರುವುದರಲ್ಲಿ ಸಣ್ಣದಾದ ಗಿಡದಿಂದ ಹಿಡಿದು ದೊಡ್ಡ ಮರದವರೆಗೆ ಲೆಕ್ಕ ಹಾಕಲಾಗಿರುತ್ತದೆ ಎಂದು ಬಿಎಂಆರ್​ಸಿಎಲ್ ಹಿರಿಯ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಸ್ಪಷ್ಟನೆ ನೀಡಿದ್ದಾರೆ.

ಮತ್ತೊಂದೆಡೆ, ಈ ಎರಡು ಮಾರ್ಗಗಳಲ್ಲೂ ಮರಗಳನ್ನು ಕಡಿಯಲು ಈಗಾಗಲೇ ಬಿಎಂಆರ್​ಸಿಎಲ್ ಸಿದ್ಧತೆ ಮಾಡಿಕೊಂಡಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಮರಗಳನ್ನು ಕಡಿಯುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಏಕಾಏಕಿ ಮರಗಳನ್ನು ಕಡಿಯಲು ಮುಂದಾಗಬಾರದು. ಮರಗಳನ್ನು ಸ್ಥಳಾಂತರಿಸಲು ಮುಂದಾಗಬೇಕು. ಮೆಟ್ರೋಕ್ಕಾಗಿ ಕಡಿಯುವ ಮರಗಳ ಬದಲಿಗೆ ಬೇರೆಡೆ ಗಿಡಗಳನ್ನು ನೆಡಲು ಬೆಂಗಳೂರಿನಲ್ಲಿ ಜಾಗವಿಲ್ಲ ಎಂದು ಪರಿಸರ ಹೋರಾಟಗಾರ ವಿಜಯ್ ನಿಶಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮೂರನೇ ಹಂತದ ನಮ್ಮ ಮೆಟ್ರೋ ಕಾಮಗಾರಿಗಾಗಿ ಬರೋಬ್ಬರಿ 11 ಸಾವಿರ ಮರಗಳನ್ನು ಕಡಿಯಲು ಮೆಟ್ರೋ ಮುಂದಾಗಿದೆ ಎಂಬುದು ಪರಿಸರ ಹೋರಾಟಗಾರರ ಆರೋಪ, ಆಕ್ರೋಶ. ಆದರೆ ನಮ್ಮ ಮೆಟ್ರೋ ಮಾತ್ರ, ಅಷ್ಟು ಮರಗಳನ್ನು ಕಡಿಯುವುದಿಲ್ಲ ಎನ್ನುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments