ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ಸೀರೆ ಖರೀದಿಸುವ ನೆಪದಲ್ಲಿ ಅಂಗಡಿಗಳಿಗೆ ತೆರಳಿದ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ದುಬಾರಿ ಬೆಲೆಯ ರೇಷ್ಮೆ ಸೀರೆ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ನಾಲ್ವರು ಕಳ್ಳಿಯರನ್ನ ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಾನಕಿ, ಪೊನ್ನುರು ಮಲ್ಲಿ, ಮೇಧ ರಜಿನಿ ಹಾಗೂ ವೆಂಕಟೇಶ್ವರಮ್ಮ ಬಂಧಿತ ಆರೋಪಿಗಳು. ಬಂಧಿತರಿಂದ 17.5 ಲಕ್ಷ ಬೆಲೆಬಾಳುವ 38 ರೇಷ್ಮೆ ಸೀರೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಜೆ.ಪಿ.ನಗರ ಠಾಣಾ ವ್ಯಾಪ್ತಿಯ ಸಿಲ್ಕ್ ಹೌಸ್ ವೊಂದರಲ್ಲಿ ಸೀರೆ ಖರೀದಿ ನೆಪದಲ್ಲಿ ಬಂದ ಆರು ಮಂದಿ ಆರೋಪಿತೆಯರು ದುಬಾರಿ ಬೆಲೆಯ ರೇಷ್ಮೆ ಸೀರೆ ತೋರಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಸೀರೆಗಳನ್ನ ತೋರಿಸುವಾಗಲೇ ಕೈಚಳಕ ತೋರಿದ ಆರೋಪಿಗಳು ಸಿಬ್ಬಂದಿಗಳ ಗಮನವನ್ನು ಬೇರೆಡೆಗೆ ಸೆಳೆದು ಇಬ್ಬರು ಮಹಿಳೆಯರು ಧರಿಸಿದ್ದ ಸೀರೆಯೊಳಗೆ 8 ಹೊಸ ಸೀರೆ ಅವಿತುಕೊಂಡು ಎಸ್ಕೇಪ್ ಆಗಿದ್ದಾರೆ.
ತದನಂತರ ಅಂಗಡಿಯಲ್ಲಿದ್ದ ನಾಲ್ವರು ಮಹಿಳೆಯರು ಒಟ್ಟು 10 ಸೀರೆಗಳನ್ನು ಬಚ್ಚಿಟ್ಟುಕೊಂಡು ಅಂಗಡಿಯಿಂದ ಹೊರ ಹೋಗುವಾಗ ಅನುಮಾನಗೊಂಡ ಸಿಬ್ಬಂದಿಯು ಆರೋಪಿಗಳನ್ನು ತಡೆದು ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬಯಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ಬಂಧಿಸಲಾಯಿತು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.
ಪೊಲೀಸ್ ಕಸ್ಟಡಿ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಜಯನಗರ, ಜೆ.ಪಿ.ನಗರ ಸೀರೆ ಅಂಗಡಿಗಳಲ್ಲಿಯೂ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಸೀರೆಗಳನ್ನು ಕಳ್ಳತನ ಮಾಡುತ್ತಿರುವು ಬೆಳಕಿಗೆ ಬಂದಿದ್ದೆ. ಕದ್ದ ಸೀರೆಗಳನ್ನ ಸ್ನೇಹಿತೆಯ ಮುಖಾಂತರ ಕಡಿಮೆ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು. ಆಂಧ್ರಪ್ರದೇಶದಿಂದ ಬಂದಿದ್ದ ಮೂಲತಃ ಆರೋಪಿಗಳು ಕಳ್ಳತನ ಮಾಡಲೆಂದೇ ನಗರಕ್ಕೆ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.