ಬೆಂಗಳೂರು: ಅಪ್ರಾಪ್ತ ಹೆಣ್ಣು ಮಕ್ಕಳನ್ನ ಕಳ್ಳಸಾಗಣಿಕೆ ಮೂಲಕ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ ಹೊಂಗಸಂದ್ರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಓರಿಸ್ಸಾ ಮೂಲದ ಸೂರಜ್ ಸಹಜಿ (26), ಕರೀಷ್ಮಾ ಶೇಕ್ (23) ಹಾಗೂ ಸ್ಥಳಿಯ ನಿವಾಸಿ ಸುಬ್ರಹ್ಮಣ್ಯ ಶಾಸ್ತ್ರಿ ಎಂಬಾತನನ್ನ ಬಂಧಿಸಲಾಗಿದೆ.
ದಾಳಿ ವೇಳೆ ಪಶ್ಚಿಮ ಬಂಗಾಳ ವಿಳಾಸದ ಇಬ್ಬರು ಅಪ್ರಾಪ್ತ ಬಾಲಕಿಯರು ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಅವರು ಬಾಂಗ್ಲಾದೇಶ ಮೂಲದವರು ಎಂದು ತಿಳಿದು ಬಂದಿದೆ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿ ಅಪ್ರಾಪ್ತೆಯರನ್ನ ಕರೆಸಿಕೊಂಡಿದ್ದ. ಆತನ ಸೂಚನೆ ಮೇರೆಗೆ ಉಳಿದ ಆರೋಪಿಗಳಿಬ್ಬರೂ ಅಪ್ರಾಪ್ತೆಯರನ್ನ ಕರೆತಂದಿದ್ದರು. ಬಳಿಕ ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು.
ಆರೋಪಿಗಳ ವಿರುದ್ಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.


