ರಾಯಚೂರು: ಬಳ್ಳಾರಿಯು ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣದ ಬೆನ್ನಲ್ಲೇ ಬೆಳಗಾವಿಯಲ್ಲಿಯೂ ಬಾಣಂತಿಯರ ಹಾಗೂ ಶಿಶುಗಳ ಮಾರನ ಹೋಮದ ಬಗ್ಗೆ ವರದಿಯಾಗಿತ್ತು. ಇದೀಗ ರಾಯಚೂರಿನಲ್ಲಿಯೂ ಬಾಣಂತಿಯರ ಸರಣ ಸಾವಾಗಿರುವ ಬಗ್ಗೆ ವರದಿಯಾಗಿದೆ.
ರಾಯಚೂರಿನ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಮೃತ ಬಾಣಂತಿಯರನ್ನು ಚಂದ್ರಕಲಾ(26) , ರೇಣುಕಮ್ಮ(32), ಮೌಸಮಿ ಮಂಡಲ್(22), ಚನ್ನಮ್ಮ ಗುರುತಿಸಲಾಗಿದೆ.
ಅಕ್ಟೋಬರ್ ತಿಂಗಳಲ್ಲಿ ನಡೆದ 300 ಹೆರಿಗೆಗಳಲ್ಲಿ 7 ಜನರ ಸ್ಥಿತಿ ಗಂಭೀರವಾಗಿತ್ತು. ಆ ಪೈಕಿ 4 ಜನ ಸಾವನ್ನಪ್ಪಿದ್ದಾರೆ. ಅ.21 ರಂದು ಚನ್ನಮ್ಮ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆಯಾಗಿತ್ತು. ಅದಾದ 9 ದಿನಗಳ ಬಳಿಕ ಸಾವನ್ನಪ್ಪಿದ್ದರು. ಅ.22 ರಂದು ಆರ್‌ಎಚ್ ಕ್ಯಾಂಪ್-3ರಲ್ಲಿ ಮೌಸಮಿ ಮಂಡಲ್ ಹೆರಿಗೆಯಾಗಿತ್ತು. ಬಳಿಕ ಮಾರನೇ ದಿನ ಸಾವನ್ನಪ್ಪಿದ್ದರು. ಅ.31 ರಂದು ರೇಣುಕಮ್ಮ ಹೆರಿಗೆಯಾಗಿತ್ತು. ಮಾರನೇ ದಿನ ಸಾವನ್ನಪ್ಪಿದ್ದಾರೆ.
ಮೃತ ನಾಲ್ವರದ್ದೂ ಸಿಜೇರಿಯನ್ ಹೆರಿಗೆಯಾಗಿತ್ತು. ಎಲ್ಲಾ ಬಾಣಂತಿಯರನ್ನು ಹೆರಿಗೆ ಬಳಿಕ ರಿಮ್ಸ್ (RIMS) ಆಸ್ಪತ್ರೆಗೆ ರವಾನಿಸಲಾಗಿತ್ತು. ರವಾನಿಸುವಾಗ ಓರ್ವ ಬಾಣಂತಿ ಮಾರ್ಗ ಮಧ್ಯೆ ಸಾವನ್ನಪ್ಪಿದರು, ಮೂವರು ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಬಾಣಂತಿಯರ ಕುಟುಂಬಸ್ಥರು, ವೈದ್ಯರು ಸಮಯಕ್ಕೆ ಸರಿಯಾಗಿ ಹೆರಿಗೆ ಮಾಡಲಿಲ್ಲ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಸಾವಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತ ಬಾಣಂತಿಯರ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕು. ಇಲ್ಲದಿದ್ದರೆ ಚಳಿಗಾಲ ಅಧಿವೇಶನ ವೇಳೆ ಶಿಶುಗಳೊಂದಿಗೆ ಪ್ರತಿಭಟನೆ ಮಾಡುತ್ತೇವೆ ಎಂದ ಎಚ್ಚರಿಕೆ ನೀಡಿದ್ದಾರೆ.