ರಾಜಕೀಯರಾಜ್ಯಸುದ್ದಿಹಣಕಾಸು

ಇರಾನ್ ಇಸ್ರೇಲ್ ಸಮರಕ್ಕೆ ತತ್ತರಿಸಿದ ಬಳ್ಳಾರಿ ಜೀನ್ಸ್ ಉದ್ಯಮ: ರಫ್ತು ಸ್ಥಗಿತ, ಉತ್ಪದಾನೆ ಕುಸಿತ

ಬಳ್ಳಾರಿ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯ ಕೈಗಾರಿಕೆಗಳಿಗೂ ತೀವ್ರವಾಗಿ ತಟ್ಟಿದೆ. ಕರ್ನಾಟಕದ ಬಳ್ಳಾರಿಯಲ್ಲಿ ಪ್ರಸಿದ್ಧಿಯಾಗಿರುವ ಜೀನ್ಸ್ ಉದ್ಯಮ ಈಗ ಈ ಅಂತರಾಷ್ಟ್ರೀಯ ಉದ್ವಿಗ್ನತೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ರಾಸಾಯನಿಕಗಳ ಸರಬರಾಜು ಸ್ಥಗಿತಗೊಂಡಿರುವುದರಿಂದ ಉತ್ಪಾದನೆ ಕುಸಿತಗೊಂಡಿದ್ದು, ರಫ್ತು ಕಾರ್ಯಗಳು ಕೂಡ ತಾತ್ಕಾಲಿಕವಾಗಿ ನಿಂತುಹೋಗಿವೆ.

ಜೀನ್ಸ್ ಉತ್ಪಾದನೆಯಲ್ಲಿ ಪ್ರಮುಖವಾಗಿ ಬಳಸುವ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ ಹಾಗೂ ಪೊಟ್ಯಾಸಿಯಮ್ ಪರ್ಮಾಂಗನೇಟ್ ಮುಂತಾದ ರಾಸಾಯನಿಕಗಳು ಸಾಮಾನ್ಯವಾಗಿ ಕೊಲ್ಲಿ ರಾಷ್ಟ್ರಗಳಿಂದ ಹಡಗುಗಳ ಮೂಲಕ ಬಳ್ಳಾರಿಗೆ ತಲುಪುತ್ತವೆ. ಆದರೆ ಇರಾನ್–ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಸಮುದ್ರ ಮಾರ್ಗದ ಸರಕು ಸಾಗಣೆ ಅಸ್ತವ್ಯಸ್ತಗೊಂಡಿದ್ದು, ಈ ರಾಸಾಯನಿಕಗಳ ಪೂರೈಕೆ ಸಂಪೂರ್ಣವಾಗಿ ನಿಂತುಹೋಗಿದೆ.

ಜೀನ್ಸ್ ಉತ್ಪಾದನೆಗೆ ಅವಶ್ಯಕವಾಗಿರುವ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಹಿಂದೆ ಕಿಲೋಗೆ ಸುಮಾರು 40 ರೂಪಾಯಿಗೆ ದೊರೆಯುತ್ತಿದ್ದ ರಾಸಾಯನಿಕಗಳ ಬೆಲೆ ಈಗ 150 ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಸ್ಥಳೀಯವಾಗಿ ಇರುವ ಸ್ಟಾಕ್‌ಗಳನ್ನು ಮಾರಾಟಗಾರರು ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವುದರಿಂದ ಉದ್ಯಮಿಗಳು ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ.

ಇನ್ನೊಂದೆಡೆ, ರಂಜಾನ್ ಮತ್ತು ಯುಗಾದಿ ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿ ಬಳ್ಳಾರಿ ಜೀನ್ಸ್‌ಗಳಿಗೆ ವಿದೇಶಗಳಲ್ಲಿ ಭಾರೀ ಬೇಡಿಕೆ ಇರುತ್ತದೆ. ಈ ಬಾರಿ ಸುಮಾರು 20 ಲಕ್ಷ ಜೀನ್ಸ್ ಪ್ಯಾಂಟ್‌ಗಳನ್ನು ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುವ ಯೋಜನೆ ಇದ್ದರೂ, ರಾಸಾಯನಿಕಗಳ ಕೊರತೆಯಿಂದ ಉತ್ಪಾದನೆ ಶೇ.50ರಷ್ಟು ಕುಸಿತಗೊಂಡಿದೆ. ಪರಿಣಾಮವಾಗಿ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಧಕ್ಕೆಯಾಗಿದೆ.

ಈಗಾಗಲೇ ಕಾರ್ಮಿಕರ ಕೊರತೆಯಿಂದ ಬಳಲುತ್ತಿದ್ದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಈಗ ಕಚ್ಚಾ ವಸ್ತುಗಳ ಬೆಲೆ ಏರಿಕೆಯೂ ಮತ್ತೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

Comments (0)

Your email address will not be published. Required fields are marked *

Back to top button