ಜನಪ್ರಿಯ ಮೃದಂಗ ವಾದಕ ಬಾಲಸುಬ್ರಹ್ಮಣ್ಯಂ (ಬಾಲಿ) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬಾಲಿ ಅವರಿಗೆ ಎಂಭತ್ತು ವರ್ಷ ವಯಸ್ಸಾಗಿತ್ತು. ಬಾಲಿ ಅವರ ನಿಧನಕ್ಕೆ ಕೆ.ಎಫ್.ಎಂ.ಎ(ಕರ್ನಾಟಕ ಫಿಲಂ ಮ್ಯುಸಿಷಿಯನ್ ಅಸೋಸಿಯೇಷನ್) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಬಾಲಿ ಅವರು ನನ್ನಂತಹ ನೂರಾರು ಕಲಾವಿದರನ್ನು ಸಾಕಿ ಬೆಳಸಿದವರು. ಕಲೆಯನ್ನೇ ಉಸಿರಾಗಿ ಇಟ್ಟುಕೊಂಡಿದವರು. ಅವರ ಸಾವು ನನಗೆ ತುಂಬಾ ದುಃಖ ತಂದಿದೆ. ದೇವರು ಅವರಿಗೆ ಸದ್ಗತಿ ನೀಡಲಿ ಎಂದು ಕೆ.ಎಫ್.ಎಂ.ಎ ಅಧ್ಯಕ್ಷರಾದ ಸಾಧುಕೋಕಿಲ ತಿಳಿಸಿದ್ದಾರೆ.
‘ನಮ್ಮೆಲ್ಲರಿಗೂ ಬಾಲಿ ಅವರು ಮಾರ್ಗದರ್ಶಕರಾಗಿದ್ದರು. ಜಾತಿ-ಬೇಧ, ಮೇಲು-ಕೀಳು ನೋಡದೇ ಕಲೆಯನ್ನು ಗುರುತಿಸಿ ನಮ್ಮನ್ನು ಪ್ರೋತ್ಸಾಹಿಸಿದ ಮಹಾನ್ ವ್ಯಕ್ತಿ ಅವರು. ನಾವು ಸಿನಿಮಾರಂಗದಲ್ಲಿ ಅಥವಾ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿ ಊಟ ಮಾಡುತ್ತಿರುವುದಕ್ಕೆ ಅವರು ಕೂಡ ಕಾರಣ. ಇಡೀ ಕನ್ನಡ ಚಿತ್ರರಂಗವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ತಂದಾಗ ಎಲ್ಲ ಕಲಾವಿದರನ್ನು ಸೇರಿಸಿ, ಪ್ರೋತ್ಸಾಹ ನೀಡಿ ಬೆಳೆಸಿದವರಲ್ಲಿ ಬಾಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಅವರನ್ನು ಕಳೆದುಕೊಂಡಿರುವುದು ನಮಗೆ ಶೋಕದ ದಿನ. ಅವರ ಅಗಲಿಕೆ ನಮಗೆ ದೊಡ್ಡ ನಷ್ಟ’ ಎಂದು ಸಾಧುಕೋಕಿಲ ಹೇಳಿದ್ದಾರೆ.