ಬೆಂಗಳೂರು: ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ ‘2ಎ’ಗೆ ಸೇರ್ಪಡೆ ಮಾಡಬಾರದು. ಒಂದೊಮ್ಮೆ ಸೇರ್ಪಡೆ ಮಾಡಲು ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬುಧವಾರ ಕಾವೇರಿ ನಿವಾಸದ ಮುಂದೆ ಭೇಟಿ ಮಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ. ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ನೇತೃತ್ವದ ನಿಯೋಗ, ‘ಪಂಚಮಸಾಲಿ ಸಮುದಾಯದ ಬೇಡಿಕೆಯನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಒಂದೊಮ್ಮೆ ಬೇಡಿಕೆ ಈಡೇರಿಸಲು ಮುಂದಾದರೆ ಒಕ್ಕೂಟದಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು. ಪಂಚಮಸಾಲಿ ಲಿಂಗಾಯತ ಸಮು ದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದುವರೆದಿದೆ. ಡಾ| ನಾಗನಗೌಡ ಸಮಿತಿ, ಎಲ್.ಜಿ.ಹಾವನೂರು, ವೆಂಕಟಸ್ವಾಮಿ ಹಿಂದುಳಿದವರ್ಗಗಳ 2ನೇ ಆಯೋಗದ ವರದಿ, ನ್ಯಾ.ಓ. ಚನ್ನಪ್ಪರೆಡ್ಡಿ ವರದಿಗ ಳಲ್ಲಿ ಪಂಚಮಸಾಲಿ ಮುಂದುವರೆದ ಜನಾಂಗಎಂದಿವೆ ಎಂದು ವಿವರಿಸಿದರು.