Friday, November 21, 2025
21.7 C
Bengaluru
Google search engine
LIVE
ಮನೆ#Exclusive Newsಪ್ರಧಾನಿ ನರೇಂದ್ರ ಮೋದಿಗೆ ಭೇಟಿಯಾದ ಬಿ.ವೈ.ವಿಜಯೇಂದ್ರ....!

ಪ್ರಧಾನಿ ನರೇಂದ್ರ ಮೋದಿಗೆ ಭೇಟಿಯಾದ ಬಿ.ವೈ.ವಿಜಯೇಂದ್ರ….!

ಬೆಂಗಳೂರು : ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ಅವರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕುತ್ತಿದೆ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕೆಂದು ಬಸನಗೌಡ ಪಾಟೀಲ್​ ಯತ್ನಾಳ್ ಪಟ್ಟು ಹಿಡಿದಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಗುಸು ಗುಸು ಕೇಳಿ ಬರುತ್ತಿದೆ. ಜನವರಿಯಲ್ಲಿ ಮಹತ್ವದ ಬದಲಾವಣೆಗಳು ಆಗಲಿದೆ ಎಂದು ಯತ್ನಾಳ್​ ಟೀಂ ಹೇಳುತ್ತಿದೆ. ಮತ್ತೊಂದೆಡೆ ಯಾವುದೇ ಶೋಕಾಸ್ ನೋಟಿಸಿಗೂ ಬಗ್ಗದ ಬಸನಗೌಡ ಪಾಟೀಲ್ ಯತ್ನಾಳ್ ಎಂಡ್ ಟೀಂ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವೇಳೆಯೂ, ಯಡಿಯೂರಪ್ಪ ಕುಟುಂಬದ ವಿರುದ್ದ ಸರಣಿ ಟೀಕೆಯನ್ನು ಮುಂದುವರಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಇತ್ತ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿರುವಾಗಲೇ ವಿಜಯೇಂದ್ರ ದಿಢೀರ್​ ಬೆಳಗಾವಿಯಿಂದಲೇ ದೆಹಲಿಗೆ ಹಾರಿ ಮೋದಿ ಅವರನ್ನು ಭೇಟಿ ಮಾಡಿದ್ದು, ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.  ವಿಜಯೇಂದ್ರ ಏಕಾಏಕಿ ಏಕೆ ಮೋದಿಯನ್ನು ಭೇಟಿ ಮಾಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ಸಹ ನಡೆದಿದೆ.

ಸುಮಾರು 15 ನಿಮಿಷಗಳ ಕಾಲ ವಿಜಯೇಂದ್ರ, ಮೋದಿ ಜೊತೆ ಚರ್ಚಿಸಿದ್ದು, ಈ ವೇಳೆ ಸದ್ಯದ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಾಗೇ ಪಕ್ಷದಲ್ಲಿನ ಚಟುವಟಿಕೆ, ಯತ್ನಾಳ್ ಮತ್ತು ತಂಡದಿಂದ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್, ಭಿನ್ನರ ಹೇಳಿಕೆಯಿಂದಾಗಿ ಕಾಂಗ್ರೆಸ್ ಸರ್ಕಾರದ ಎದುರು ಆಗುತ್ತಿರುವ ಮುಜುಗರವನ್ನು ಮೋದಿ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮೋದಿ ಭೇಟಿ ಬಳಿಕ ಟ್ವೀಟ್ ಮಾಡಿರುವ ವಿಜಯೇಂದ್ರ, ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ಪ್ರಧಾನಿ ಮೋದಿಜೀಯವರ ಕಾರ್ಯ ಶೈಲಿ ನಮ್ಮಂಥ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆಯಾಗಿದೆ.ಅವರ ಆಶೀರ್ವಾದದ ಮಾರ್ಗದರ್ಶನ ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ತುಂಬಿದೆ, ಇಂದಿನ ಅವರ ಭೇಟಿಯ ಸಂದರ್ಭದ ಮಾತುಗಳು ಸಂಘಟನೆಯ ಬಲವೃದ್ಧಿಯ ಜೊತೆ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿತು ಎಂದು ಬರೆದುಕೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments