ಜನವರಿ 22. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಟೆ, ರಾಮಮಂದಿರದ ಉದ್ಘಾಟನೆ.
ದೇಶದ ರಾಮಭಕ್ತರಿಗೆ ಅಪೂರ್ವ ಕ್ಷಣ. 500 ವರ್ಷಗಳ ಹೋರಾಟಕ್ಕೆ ಸಂದ ಜಯ.
ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ವಿರಾಜಮಾನ.
ಶ್ರೀರಾಮಚಂದ್ರ ಮರ್ಯಾದಾ ಪುರುಷೋತ್ತಮ. ಪಿತೃವಾಕ್ಯ ಪರಿಪಾಲಕ, ಎಲ್ಲಾ ಜಾತಿ ಧರ್ಮವನ್ನು ಮೀರಿದ ಮೌಲ್ಯಗಳ ಪ್ರತಿಪಾದಕ. ನಮಗೆ ರಾಮ ಇಷ್ಟವಾಗುವುದು ಆತ ಪ್ರತಿಪಾದಿಸುವ ಮೌಲ್ಯದರ್ಶಗಳಿಂದ. ರಾಮ ಬ್ರಾಹ್ಮಣನೋ..? ಆತ ಕ್ಷತ್ರಿಯನೋ..? ಶೂದ್ರನೋ..? ಇವೆಲ್ಲ ಮುಖ್ಯವಾದ ಅಂಶಗಳಲ್ಲ.
90 ದಶಕದಲ್ಲಿ ರಾಮಜನ್ಮಭೂಮಿ ಹೋರಾಟ ಪ್ರಾರಂಭವಾದಾಗ, ಅಲ್ಲಿ ರಾಜಕೀಯವಿತ್ತು. ರಾಜಕೀಯ ಲಾಭ ನಷ್ಟದ ರಾಜಕಾರಣ ಇತ್ತು. ರಾಜಕೀಯ ಲಾಭದ ಕುರಿತು ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಚಿಂತಿಸಲು ಪ್ರಾರಂಭಿಸಿದ್ದವು.

ಬಿಜೆಪಿ ಹಿಂದುತ್ವದ ರಾಜಕಾರಣದ ವೇದಿಕೆ ಆಗಲೇ ಸೃಷ್ಟಿಯಾಗತೊಡಗಿತ್ತು. ಈ ದೇಶದ ರಾಜಕಾರಣ ‘ರಾಮ’ಕಾರಣವಾಗಿ ಬದಲಾಗ ತೊಡಗಿತು.
ಹೌದು, ರಾಜಕಾರಣ ರಾಮಕಾರಣವಾಗಿ ಬದಲಾಗ ತೊಡಗಿದ್ದು ಆಗಲೇ. ಬಿಜೆಪಿಗೆ ರಾಮ ಮತ್ತು ರಾಮಜನ್ಮಭೂಮಿ ಬಹುದೊಡ್ಡ ಅಸ್ರ್ತವಾಗಿ ಕಾಣತೊಡಗಿತ್ತು. ಯಾಕೆಂದರೆ ಅದರ ಹಿಂದೆ ಹಿಂದೂಗಳ ನಂಬಿಕೆಯ ಅಡಿಪಾಯ ಇತ್ತು. ಕೇವಲ ರಾಮಮಂದಿರ ಕಟ್ಟುವುದು ಮಾತ್ರವಲ್ಲ, ಬಿಜೆಪಿಯ ಅಧಿಕಾರ ಸೌಧವನ್ನು ಕಟ್ಟುವ ಕನಸನ್ನು ಎಲ್. ಕೆ ಅಡ್ವಾನಿ ಕಂಡಿದ್ದರು. ಅವರ ಕನಸು ಹುಸಿಯಾಗಲಿಲ್ಲ. ಕನಸನ್ನು ಕಂಡವರು ಅಡ್ವಾನಿಯಾದರೆ, ಅದನ್ನು ನನಸು ಮಾಡಿ ಈ ಅಧಿಕಾರ ಸೌಧದಲ್ಲಿ ಕುಳಿತವರು ಪ್ರಧಾನಿ ನರೇಂದ್ರ ಮೋದಿ. ಅವರಿಗೆ ಸಿಂಹಾಸನ ಸಿಕ್ಕರೆ, ಅಡ್ವಾನಿಯವರಿಗೆ ದಕ್ಕಿದ್ದು ವಾನಪ್ರಸ್ತ.
ನರೇಂದ್ರ ಮೋದಿ ರಾಜಕಾರಣವನ್ನು ರಾಮಕಾರಣವಾಗಿ ಬದಲಿಸಿದ ನಾಯಕ. 90 ದಶಕದಲ್ಲೂ ಪ್ರಾರಂಭವಾದ ರಾಮಜನ್ಮಭೂಮಿ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದವರು ಮೋದಿಯವರು. ಭಾರತೀಯರ ಮನಸ್ಸಿನಲೂ ರಾಮ ಇನ್ನಷ್ಟು ಗಟ್ಟಿಯಾದ. ಜೈ ಶ್ರೀರಾಮ ರಾಜಕೀಯ ಅಸ್ತ್ರವಾಗಿ ಎಲ್ಲೆಡೆಗೆ ಬಳಕೆಗೆ ಸಿದ್ಧವಾಯಿತು. ಬಹುಸಂಖ್ಯಾತ ಮತಗಳ ಕ್ರೋಡೀಕರಣಕ್ಕೆ ಇದೇ ಮೂಲ ಮಂತ್ರವಾಯಿತು.

ರಾಮನನ್ನ ರಾಮಕಾರಣವನ್ನ ರಾಜಕೀಯ ಲಾಭಕ್ಕಾಗಿ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಯಿತು. ಸರ್ವೋಚ್ಛ ನ್ಯಾಯಾಲಯದ ಮುಂದಿದ್ದ ಆಸ್ತಿ ಜಗಳ ನಂಬಿಕೆಯ ಆಧಾರದ ಮೇಲೆ ಇತ್ಯಾರ್ಥವಾಗಿದ್ದು ಐತಿಹಾಸಿಕವಾದದ್ದು. ಇಬ್ಬರ ನಡುವಿನ ಆಸ್ತಿ ಜಗಳ ನಂಬಿಕೆಯ ಆಧಾರದ ಮೇಲೆ ತೀರ್ಮಾನವಾಗಿದ್ದು ವಿಶೇಷ.
ಇದಾದ ಮೇಲೆ ರಾಮಮಂದಿರದ ನಿರ್ಮಾಣ, ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಎದ್ದು ನಿಂತ ರಾಮಮಂದಿರ ಎಲ್ಲವೂ ಪೂರ್ಣಗೊಂಡಾಗ 70 ಸಾವಿರ ಕೋಟಿಗೂ ಹೆಚ್ಚು ವೆಚ್ಚ. ದೇಶ ವಿದೇಶಗಳ ಭಕ್ತರನ್ನ ಆಕರ್ಷಿಸುವ ಕೇಂದ್ರ.
ಈಗಾಗಲೇ ಜನವರಿ 22ರ ಕಾರ್ಯಕ್ರಮಕ್ಕೆ ಆಹ್ವಾನ ಪತ್ರ ಮತ್ತು ಮಂತ್ರಾಕ್ಷತೆಯನ್ನ ಹಂಚಲಾಗುತ್ತಿದೆ. ಬಿಜೆಪಿಯ ಕಾರ್ಯಕರ್ತರ ಪಡೆ ಮನೆ ಮನೆಗೆ ಭೇಟಿ ನೀಡಿ ಆಹ್ವಾನ ಪತ್ರವನ್ನು ನೀಡುತ್ತಿದೆ. ಈ ಮಂತ್ರಾಕ್ಷತೆಯನ್ನು ಅಯೋಧ್ಯೆಯಿಂದ ತರಲಾಗಿದೆ ಎಂಬುದು ಬಿಜೆಪಿ ಕಾರ್ಯಕರ್ತರ ವಾದ.
ಶ್ರೀರಾಮಚಂದ್ರನ ಮೂರ್ತಿಯ ಪ್ರತಿಷ್ಠಾಪನೆಯಾಗದೇ ಮಂತ್ರಾಕ್ಷತೆ ಬಂದಿದ್ದು ಎಲ್ಲಿಂದ? ಈ ಪ್ರಶ್ನೆಯನ್ನ ಕೇಳುವಂತಿಲ್ಲ ಕೇಳಿದರೆ ಕೇಳಿದವರು ಧರ್ಮದ ವಿರೋಧಿಗಳು.
ಧರ್ಮ ಮತ್ತು ರಾಜಕಾರಣ ಒಂದಾದರೆ ಆಗುವ ಸಮಸ್ಯೆ ಇದು. ಧರ್ಮಕ್ಕೆ ರಾಜಕಾರಣದಿಂದ ಲಾಭವಾಗುವುದಿಲ್ಲ. ಆದರೆ ರಾಜಕಾರಕ್ಕೆ ಧರ್ಮದಿಂದ ಲಾಭವಾಗುತ್ತದೆ.ಅದು ಒಂದು ಧರ್ಮದವರನ್ನು ಒಗ್ಗೂಡಿಸುತ್ತದೆ.ಈ ಮೂಲಕ ಇನ್ನೊಂದು ಧರ್ಮದವರನ್ನು ಬೇರೆ ಮಾಡುತ್ತದೆ.
ಈಗ ದೇಶದಲ್ಲಿ ಆಗುತ್ತಿರುವುದು ಇದೇ.ಇದನ್ನ ನಾವು ಕರೆಯುವುದು ಧರ್ಮ ಮತ್ತು ರಾಜಕಾರಣ ಸೇರಿದ ಧರ್ಮಕಾರಣ ಅಥವಾ ರಾಮಕಾರಣ….