ಬಾನು ಮತ್ತು ದೀಪಾ ಅವರಿಗೆ ಬುಕರ್ ಪ್ರಶಸ್ತಿ ಬಂದಿದ್ದಾಯ್ತು. ಇದೀಗ ಎಂದಿನಂತೆ, ಈ ಪ್ರಶಸ್ತಿಯ ಕ್ರೆಡಿಟ್ಟನ್ನು ಹರಿದುಹಂಚಿಕೊಳ್ಳುವ ಕೆಟ್ಟ ಚಾಳಿ ಚಾಲ್ತಿಯಲ್ಲಿದೆ.
ಕೆಲವರು ಬಾನು ಅವರ ಗಂಡನಿಗೆ ಒಂದಷ್ಟು ಕ್ರೆಡಿಟ್ ತೆಗೆದು ಕೊಟ್ಟರು. ಮತ್ತೆ ಕೆಲವರು ಲಂಕೇಶರಿಗೆ ಒಂದಷ್ಟು ಕ್ರೆಡಿಟ್ ಸುರಿದುಕೊಟ್ಟರು. ಮತ್ತಷ್ಟು ಮಂದಿ ಹೋರಾಟ, ಚಳವಳಿ ಮಣ್ಣು-ಮಸಿ ಅಂತ ಮತ್ತೊಂದಷ್ಟು ಕ್ರೆಡಿಟ್ ಅಳೆದು ಕೊಡೋಕೆ ತುದಿಗಾಲಿನಲ್ಲಿದ್ದಾರೆ.
ನನಗೆ ಸೋಜಿಗವೆಂದರೆ, ಅವರಿಗೆ ಪ್ರಶಸ್ತಿ ಸಿಕ್ಕ ತಕ್ಷಣ, ಕ್ರೆಡಿಟ್ಟನ್ನೆಲ್ಲ ಹೀಗೆ ಇವರಿಗೆ ಇಷ್ಟ ಬಂದವರಿಗೆ ಹಂಚೋಕೆ ಇವರೆಲ್ಲ ಯಾರು? ಅಂದ್ರೆ, ಯಾರಿಗಾದರೂ ಪ್ರಶಸ್ತಿಯ ಕ್ರೆಡಿಟ್ ಸಲ್ಲಬೇಕಾದ್ದು ಹೌದೇ ಆಗಿದ್ದರೆ ಅದನ್ನು ನಿಜವಾಗಿ ಸಲ್ಲಿಸಬೇಕಾದವರು ಯಾರು? ಖುದ್ದು ಬಾನು ಅವರು ತಾನೇ? ಇಷ್ಟೂ ವಿವೇಕ (ಕಾಮನ್ ಸೆನ್ಸ್) ಇಲ್ಲದಿದ್ದರೆ ಹೇಗೆ?
ಇವತ್ತು ಬೆಳಗ್ಗೆ ವಿ ಎಲ್ ನರಸಿಂಹಮೂರ್ತಿ ಸರ್ ಟಿಪ್ಪಣಿ ಕಂಡ ಮೇಲೆ ಇದನ್ನು ಬರೆಯಬೇಕೆನಿಸಿತು; ಯಾವುದಾದರೂ ಪತ್ರಿಕೆ ಬರಹಗಾರರನ್ನು ಬೆಳೆಸಬಲ್ಲುದೇ? ಹಾಗೆ ಬರಹಗಾರರನ್ನು ಬೆಳೆಸುವುದು ಅಂದ್ರೆ ಏನು?
ಒಬ್ಬ ಪತ್ರಕರ್ತನಾಗಿ, ಅದರಲ್ಲೂ ಸಂಪಾದಕೀಯ ಪುಟದ ಉಸ್ತುವಾರಿ ಮತ್ತು ಫೀಚರ್ಸ್ ಎಡಿಟರ್ ಆಗಿ – ನನ್ನ ಟೇಬಲ್‌ಗೆ ಬರುವ ಬರಹಗಳಲ್ಲಿ ನಾ ಈ ಸಂಗತಿಗಳನ್ನಷ್ಟೇ ನೋಡುವವನು:
೧. ಬರಹ ಗಟ್ಟಿಯಾಗಿದೆಯಾ?
೨.ನಿರೂಪಣೆ ಹೊಸತನದಿಂದ ಕೂಡಿದೆಯಾ?
೩. ಗ್ರಹಿಕೆ ಆರೋಗ್ಯಕರವಾಗಿದೆಯಾ?
೪.ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದೆಯಾ?
೫.ತಪ್ಪಿಲ್ಲದಂತೆ ಬರೆದಿದ್ದೀರಾ?
ಬರಹ ಈ ಐದೂ ಕ್ರೈಟೀರಿಯಾ ದಾಟದಿದ್ದರೆ, ಬರೆದವರು ಎಂತಹ ದೊಡ್ಡ ತುಂಡೇ ಆಗಿದ್ದರೂ ನಪಾಸು. ಬೇರೆಯವರ ಕತೆ ಗೊತ್ತಿಲ್ಲ, ನಾನಂತೂ ಈ ವಿಷಯದಲ್ಲಿ ಯಾವುದೇ ಮುಲಾಜು ನೋಡಿದ್ದಿಲ್ಲ.
ಸೋ, ಹೀಗೆ ಬರಹವಷ್ಟೇ ಮಾನದಂಡವಾದಾಗ ಯಾವುದೇ ಕ್ರೆಡಿಟ್ಟುಗಳು ಬರಹಗಾರರಿಗಷ್ಟೇ ಸಲ್ಲಬೇಕು – ಪತ್ರಿಕೆಗಲ್ಲ. ದಿ ಗ್ರೇಟ್ ‘ಪ್ರಜಾವಾಣಿ’ ವಿಷಯದಲ್ಲೂ ಸಾಕಷ್ಟು ಮಂದಿ ಇದೇ ಥರ ಕ್ರೆಡಿಟ್ ಸುರಿದು ಕೊಡುವುದುಂಟು. ಕೃತಜ್ಞತೆ ಇರಬೇಕು ನಿಜ, ಹಾಗಂತ ತಲೆ ಅಡ ಇಟ್ಟವರಂತೆ ವರ್ತಿಸಬಾರದು.
ನಾನು ಸುದ್ದಿಸಂಸ್ಥೆಗಳಲ್ಲಿ ಕೆಲಸ ಮಾಡುವಾಗ, ಲೇಖನ ಪ್ರಕಟವಾದಾಗ ಸಂಸ್ಥೆಯ ಹೆಸರಿನ ಜೊತೆ ನನ್ನ ಹೆಸರೂ ಬರೆದು ಥ್ಯಾಂಕ್ಸ್ ಹೇಳುತ್ತಿದ್ದವರಿಗೆಲ್ಲ ಇದನ್ನು ಮನದಟ್ಟು ಮಾಡಿರುವೆ. ಅವರ ಬರಹ ಪ್ರಕಟವಾಗಲು ಯೋಗ್ಯವಿತ್ತು, ಹಾಗಾಗಿ ಮಾತ್ರವೇ ಪ್ರಕಟವಾಗಿದೆ ಅನ್ನೋದು ನನ್ನ ಖಚಿತ ಅಭಿಪ್ರಾಯ. ನಾನು ಆ ಕೆಲಸ ಮಾಡಿದ್ದು ನನ್ನ ಸಂಸ್ಥೆ ಕೊಡುವ ಸಂಬಳಕ್ಕಷ್ಟೆ.
ಸೋ… ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದ, ಈಗ ಒಳ್ಳೆಯ ಬರಹಗಾರರು ಎನಿಸಿಕೊಂಡ ಎಲ್ಲರೂ ತಮ್ಮ ಗ್ರಹಿಕೆ ಮತ್ತು ಬರಹದ ಕೌಶಲ್ಯದಿಂದಾಗಿಯೇ ಬೆಳೆದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಈ ‘ಬೆಳೆಸಿದರು’ ಅನ್ನೋದು ಯಾವಾಗ ಅಪ್ಲೈ ಆಗ್ತದೆ ಅಂದ್ರೆ… ಬರಹ ಕೌಶಲ್ಯ ಇಲ್ಲದಿದ್ದರೂ ಪತ್ರಿಕೆಯವರೇ ತಿದ್ದಿ-ತೀಡಿ ಬರೆಸಿದಾಗ, ಬರೆಯುವವರ ಹಿನ್ನೆಲೆಯನ್ನಷ್ಟೇ ಮಾನದಂಡವಾಗಿಟ್ಟುಕೊಂಡು ಬರೆಯಲು ಪ್ರೋತ್ಸಾಹ ಕೊಟ್ಟಾಗ, ಇಂಥದ್ದನ್ನು ಹೀಗೆ ಬರೆಯಿರಿ ಅಂತ ಪತ್ರಿಕೆಯವರೇ ಹೇಳಿ ಬರೆಸಿದಾಗ.
ಇಂತಹ ಪ್ರಸಂಗ ಬಾನು ಅವರ ವಿಷಯದಲ್ಲಾಗಲೀ, ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದು ಬರಹಗಾರರಾದ ಬಹುತೇಕರ ವಿಷಯದಲ್ಲಾಗಲೀ ಆಗಿದೆ ಅಂತ ನನಗನ್ನಿಸೋಲ್ಲ. ಹಾಗಾಗಿ, ಲಂಕೇಶ್ ಮೇಲಿನ ಅಭಿಮಾನದ ಕಾರಣಕ್ಕೆ ಕ್ರೆಡಿಟ್ ಕೊಡಲು ಅಥವಾ ಕ್ರೆಡಿಟ್ ಕೊಡಿಸಲು ಹೊರಟಿರುವ ಸಾಧ್ಯತೆಯೇ ಹೆಚ್ಚು.
‘ಲಂಕೇಶ್ ಪತ್ರಿಕೆ’ ವಿಷಯದಲ್ಲಿ ಯಾವುದೇ ಚರ್ಚೆ ಆದರೂ, ತಕರಾರುಗಳು ಅಥವಾ ತರಾಟೆಗಳು ಲಂಕೇಶರಿಗೆ ತಾಕದೆ ಇರುವುದಿಲ್ಲ. ‘ಲಂಕೇಶ್ ಪತ್ರಿಕೆ’ಯ ಸ್ವರೂಪವೇ (ಲಂಕೇಶ್ ಅವರೇ ಎಲ್ಲ ಅನ್ನುವಂತೆ) ಹಾಗಿರುವುದರಿಂದ ಪತ್ರಿಕೆಯನ್ನು ವ್ಯಕ್ತಿಯಿಂದ ಬಿಡಿಸಿಕೊಂಡು ತರಾಟೆಗೆ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟವೇ. ಆದರೆ, ಲಂಕೇಶ್ ಇದ್ದಿದ್ದರೆ ಹೀಗೆ ಕ್ರೆಡಿಟ್ ತಗೋತಿದ್ರಾ ಅನ್ನೋ ಕೇಳ್ವಿ ನಿಮ್ಮದಾದರೆ, ಖಂಡಿತ ಇಲ್ಲ ಅನ್ನೋದು ನನ್ನ ಸ್ಪಷ್ಟ ಉತ್ತರ.
– ಸಹ್ಯಾದ್ರಿ ನಾಗರಾಜ್, ಪತ್ರಕರ್ತರು