2026ರ ಮಾರ್ಚ್ 3 ರಂದು ಸಂಭವಿಸಲಿರುವ ಚಂದ್ರಗ್ರಹಣ ಕೇವಲ ಬಣ್ಣಗಳ ಹಬ್ಬದಂದು ಬರುವ ಗ್ರಹಣ ಮಾತ್ರವಲ್ಲದೆ, ವಿಜ್ಞಾನ ಮತ್ತು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಅತ್ಯಂತ ವಿಶೇಷವಾಗಿದೆ.
ಈ ಬಾರಿಯ ಪೂರ್ಣ ಚಂದ್ರಗ್ರಹಣವನ್ನು ‘ಬ್ಲಡ್ ಮೂನ್’ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಕಾರಣ ‘ರೇಲಿ ಸ್ಕ್ಯಾಟರಿಂಗ್’ ಎಂಬ ವಿದ್ಯಮಾನ. ಸೂರ್ಯನ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ, ಅಲೆನೀಲಿ ಬಣ್ಣಗಳು ಚದುರಿಹೋಗಿ ಕೇವಲ ಕೆಂಪು ಮತ್ತು ಕಿತ್ತಳೆ ಬಣ್ಣದ ಕಿರಣಗಳು ಮಾತ್ರ ಚಂದ್ರನ ಮೇಲೆ ಬೀಳುತ್ತವೆ. 2026ರ ಈ ಗ್ರಹಣವು ಮತ್ತೊಂದು ಅಪರೂಪದ ವೈಜ್ಞಾನಿಕ ವಿಶೇಷತೆಯನ್ನು ಹೊಂದಿದೆ; ಅಂದು ಚಂದ್ರನು ಭೂಮಿಯ ನೆರಳಿನ ತುದಿಯಲ್ಲಿ ಚಲಿಸುವುದರಿಂದ, ಓಜೋನ್ ಪದರದ ಮೂಲಕ ಹಾದು ಬರುವ ಬೆಳಕಿನಿಂದಾಗಿ ಚಂದ್ರನ ಅಂಚಿನಲ್ಲಿ ನೇರಳೆ ಅಥವಾ ತಿಳಿ ನೀಲಿ ಬಣ್ಣದ ಗೆರೆ ಕಾಣಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇದು ಚಂದ್ರನನ್ನು ಕೇವಲ ಕೆಂಪಾಗಿಸುವುದಲ್ಲದೆ, ಒಂದು ವಿಶಿಷ್ಟವಾದ ‘ಹೈ-ಕಾಂಟ್ರಾಸ್ಟ್’ ನೋಟವನ್ನು ನೀಡಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಚಂದ್ರಗ್ರಹಣವು ಸಿಂಹ ರಾಶಿ ಮತ್ತು ಪೂರ್ವಾ ಫಾಲ್ಗುಣಿ ನಕ್ಷತ್ರದಲ್ಲಿ ಸಂಭವಿಸುತ್ತಿದೆ. ಅಂದು ಕೇತು ಮತ್ತು ಚಂದ್ರನ ಸಂಯೋಗವಿರುವುದರಿಂದ ಕೆಲವು ರಾಶಿಗಳ ಮೇಲೆ ಇದರ ಪ್ರಭಾವ ಹೆಚ್ಚಿರಲಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಈ ಗ್ರಹಣವು ಫಾಲ್ಗುಣ ಪೂರ್ಣಿಮೆಯ ದಿನವೇ ಬರುತ್ತಿರುವುದರಿಂದ, ಸೂತಕದ ನಿಯಮಗಳು ಅನ್ವಯವಾಗುತ್ತವೆ. ಗ್ರಹಣದ ಅವಧಿಯಲ್ಲಿ ಆಹಾರ ಸೇವನೆ ಮಾಡದಿರುವುದು, ದೇವತಾ ನಾಮಸ್ಮರಣೆ ಮಾಡುವುದು ಮತ್ತು ಗ್ರಹಣದ ನಂತರ ಸ್ನಾನ ಮಾಡಿ ದಾನ ಧರ್ಮಗಳನ್ನು ಮಾಡುವುದು ಭಾರತೀಯ ಸಂಪ್ರದಾಯದಲ್ಲಿ ರೂಢಿಯಲ್ಲಿದೆ.
ಚಂದ್ರಗ್ರಹಣವನ್ನು ನೋಡಲು ಯಾವುದೇ ವಿಶೇಷ ಕನ್ನಡಕಗಳ ಅಗತ್ಯವಿಲ್ಲ. ಪೂರ್ವ ದಿಗಂತದ ಕಡೆಗೆ ಮುಖ ಮಾಡಿ ನಿಂತರೆ, ಉದಯಿಸುತ್ತಿರುವ ಕೆಂಪು ಚಂದ್ರನನ್ನು ನೀವು ಬರಿಗಣ್ಣಿನಿಂದಲೇ ಸ್ಪಷ್ಟವಾಗಿ ನೋಡಬಹುದು.


