ಬೆಂಗಳೂರು: ನಗರ ದಕ್ಷಿಣ ಎಸಿ ಅಪೂರ್ವ ಬಿದರಿ ವಿರುದ್ಧ ರಾಜಧಾನಿಯ ವಕೀಲರು ತಿರುಗಿ ಬಿದ್ದಿದ್ದಾರೆ. ನಿನ್ನೆ ಎಸಿ ಕೋರ್ಟ್ ತೆಗೆದುಕೊಂಡಿದ್ದ ವೇಳೆ ವಕೀಲ ಚಂದ್ರಶೇಖರ್ ರೆಡ್ಡಿ ಅವರಿಗೆ ಈಡಿಯಟ್ ಎಂದು ಬೈದಿದ್ದಾರೆ ಎಂದು ವಕೀಲರು ಎಸಿ ಕಚೇರಿ ಎದುರು ಧರಣಿ ನಡೆಸಿರುವ ಘಟನೆ ಬುಧವಾರ ನಡೆದಿದೆ. ಮುಂದುವರೆದು ಇಂದು ಸುದ್ದಿಗೋಷ್ಠಿ ಕರೆದಿರುವ ವಕೀಲರು ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ ವಿರುದ್ಧ ಸಮರ ಸಾರಿದ್ದಾರೆ.
ಫ್ರೀಡಂ ಟಿವಿ ಜೊತೆ ಮಾತನಾಡಿದ ವಕೀಲರು ಎಸಿ ತಡವಾಗಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳನ್ನು ಬಳಸಿ ದಾಷ್ಟ್ಯದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಬೆಂಗಳೂರು ಎಸಿ ಕೋರ್ಟ್ ಗಳಲ್ಲಿ ನಡೆಯುವ ಪ್ರಕರಣಗಳು ಬಹುಕೋಟಿ ಭೂವ್ಯಾಜ್ಯಗಳಿಗೆ ಸಂಬಂಧಪಟ್ಟಿರುತ್ತವೆ. ಈ ಪ್ರಕರಣಗಳಲ್ಲಿ ಪ್ರಭಾವಿ ಬಿಲ್ಡರ್ ಗಳು, ರಾಜಕಾರಣಿಗಳು ಪ್ರತ್ಯಕ್ಷ, ಪರೋಕ್ಷವಾಗಿ ಭಾಗಿಯಾಗಿರುತ್ತಾರೆ. ಬೆಂಗಳೂರು ಸುತ್ತಮುತ್ತಲಿನ ಭೂಮಿಗೆ ಚಿನ್ನದ ಬೆಲೆ ಇದ್ದು, ಎಸಿ ಹುದ್ದೆಗೆ ಭಾರಿ ಬೇಡಿಕೆ ಇದೆ. ಬೆಂಗಳೂರು ಉತ್ತರ, ದಕ್ಷಿಣ ಎಸಿ ಹುದ್ದೆಗಳು ಮಂತ್ರಿಗಿರಿಯಷ್ಟೇ ಪ್ರಭಾವ ಹೊಂದಿವೆ ಎನ್ನಲಾಗುತ್ತದೆ.
ಇಂತಹ ಹೊತ್ತಿನಲ್ಲಿ ವಕೀಲರೊಂದಿಗೆ ಬೆಂಗಳೂರು ದಕ್ಷಿಣ ಎಸಿ ಮಾಡಿಕೊಂಡಿರುವ ರಾದ್ಧಾಂತವು ಮುಂದೆ ಯಾವ ತಿರುವು ಪಡೆಯುತ್ತದೆ ಎಂಬುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆಗೆ ಅಪೂರ್ವ ಬಿದರಿ ಸಂಪರ್ಕಕ್ಕೆ ಸಿಕ್ಕಿಲ್ಲ.