New delhi

ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಕಹಳೆ; ಏಪ್ರಿಲ್ 9 ರಿಂದ ಮತದಾನ!

ನವದೆಹಲಿ: ಭಾರತದ ಐದು ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇಂದು ದಿನಾಂಕಗಳನ್ನು ಘೋಷಿಸುವ ಮೂಲಕ ರಾಜಕೀಯ ಸಮರಕ್ಕೆ ಅಧಿಕೃತ ಮುಹೂರ್ತ ನಿಗದಿಪಡಿಸಿದೆ. ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದರು. ಈ ಘೋಷಣೆಯ ಬೆನ್ನಲ್ಲೇ ಈ ಐದೂ ರಾಜ್ಯಗಳಲ್ಲಿ ಇಂದಿನಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 9 ರಿಂದ ಏಪ್ರಿಲ್ 29 ರವರೆಗೆ ವಿವಿಧ ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 4 ರಂದು ಎಲ್ಲಾ ರಾಜ್ಯಗಳ ಫಲಿತಾಂಶ ಏಕಕಾಲದಲ್ಲಿ ಪ್ರಕಟವಾಗಲಿದೆ. ಅಸ್ಸಾಂ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಭದ್ರತೆಯ ದೃಷ್ಟಿಯಿಂದ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲು ಆಯೋಗ ನಿರ್ಧರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 824 ಕ್ಷೇತ್ರಗಳಿಗೆ 17.4 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಭಾರತೀಯ ಚುನಾವಣಾ ಆಯೋಗವು ಮಹತ್ವದ ಹೆಜ್ಜೆ ಇಟ್ಟಿದ್ದು, ಎಲ್ಲಾ ಮತಗಟ್ಟೆಗಳಲ್ಲಿ 100 ಪ್ರತಿಶತ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಒಟ್ಟು 2.19 ಲಕ್ಷ ಪೋಲಿಂಗ್ ಸ್ಟೇಷನ್‌ಗಳಿದ್ದು, ಸುಗಮ ಮತದಾನಕ್ಕಾಗಿ ಸುಮಾರು 25 ಲಕ್ಷ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಪಶ್ಚಿಮ ಬಂಗಾಳದ 294, ತಮಿಳುನಾಡಿನ 234, ಕೇರಳದ 140, ಅಸ್ಸಾಂನ 126 ಮತ್ತು ಪುದುಚೇರಿಯ 20 ವಿಧಾನಸಭಾ ಕ್ಷೇತ್ರಗಳಿಗೆ ಈ ಚುನಾವಣೆ ನಡೆಯಲಿದೆ.

ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಈ ಮಿನಿ ಸಮರಕ್ಕೆ ಈಗ ರಂಗು ಬಂದಿದ್ದು, ಮೇ 4ರಂದು ಪ್ರಕಟವಾಗಲಿರುವ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣು ನೆಟ್ಟಿದೆ. ಚುನಾವಣಾ ಅಖಾಡದಲ್ಲಿರುವ ವಿವಿಧ ಪಕ್ಷಗಳು ಈಗಾಗಲೇ ತಮ್ಮ ಪ್ರಚಾರ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಬಿಸಿಲ ಬೇಗೆಯ ನಡುವೆಯೇ ಚುನಾವಣಾ ಕಾವು ಕೂಡ ಏರತೊಡಗಿದೆ.

Comments (0)

Your email address will not be published. Required fields are marked *

Back to top button