Armed Forces Flag Day 2024: ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ನೋಡಿ

ದೇಶದ ರಕ್ಷಣೆಗಾಗಿ ಅಪಾರ ತ್ಯಾಗ, ಸೇವೆಯನ್ನು ಮಾಡುವವರೆಂದರೆ ಯೋಧರು. ಇಂತಹ ಭಾರತೀಯ ಸಶಸ್ತ್ರ ಪಡೆಗಳ ವೀರ ಯೋಧರ ಶೌರ್ಯ, ತ್ಯಾಗ, ಸಮರ್ಪಣೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ಹಾಗೂ ಯೋಧರ ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ನಮ್ಮ ದೇಶದಲ್ಲಿ ಡಿಸೆಂಬರ್ 7 ರಂದು ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳ ಮಾಹಿತಿ ಇಲ್ಲಿದೆ.

ದೇಶದ ರಕ್ಷಣೆ ಅಂತ ಬಂದಾಗ ಯಾರು ಮುಂದೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಎಂತಹದ್ದೇ ಪರಿಸ್ಥಿತಿ ಬಂದರೂ ಸಾವಿಗೂ ಅಂಜದೆ ದೇಶದ ರಕ್ಷಣೆಗಾಗಿ ಮೊದಲು ಮುನ್ನುಗ್ಗುವವರೇ ನಮ್ಮ ಹೆಮ್ಮೆಯ ಸೈನಿಕರು. ನಾವು ದೇಶದೊಳಗೆ ನೆಮ್ಮದಿಯಿಂದ ಇರಲು ವೀರ ಯೋಧರ ಕೊಡುಗೆಯು ಅಪಾರ. ಜೊತೆಗೆ ಇಂದು ನಮ್ಮ ದೇಶದ ಸಶಸ್ತ್ರ ಪಡೆಗಳು ವಿಶ್ವದ ಅತ್ಯುತ್ತಮ ಮತ್ತು ಹೆಚ್ಚು ವೃತ್ತಿಪರ ಪಡೆಗಳೆಂದು ಗುರುತಿಸಿಕೊಂಡಿದೆ. ಈ ಕೀರ್ತಿ ಬರಲು ಸೈನಿಕರ ತ್ಯಾಗ, ಧೈರ್ಯ, ಸಮರ್ಪಣೆಯೇ ಕಾರಣ ಎಂದು ಹೇಳಬಹುದು. ಇಂತಹ ಭಾರತೀಯ ಸೇನೆ, ವಾಯುಪಡೆ, ಭಾರತೀಯ ನೌಕಾಪಡೆಯ ಯೋಧರ ತ್ಯಾಗ, ಸೇವೆ, ಶೌರ್ಯ, ಸಮರ್ಪಣೆಯನ್ನು ಗೌರವಿಸಲು ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥವಾಗಿ ನಮ್ಮ ದೇಶದಲ್ಲಿ ಡಿಸೆಂಬರ್ 7 ರಂದು ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ಸಂಗತಿಗಳ ಮಾಹಿತಿ ಇಲ್ಲಿದೆ.
ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಇತಿಹಾಸ:
ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಪ್ರತಿ ವರ್ಷ ಡಿಸೆಂಬರ್ 7 ರಂದು ಆಚರಿಸಲಾಗುತ್ತದೆ. 1949 ರಲ್ಲಿ ಕೇಂದ್ರ ಸಚಿವ ಸಂಪುಟದ ರಕ್ಷಣಾ ಸಚಿವರ ಸಮಿತಿಯು ಭಾರತೀಯ ಸೇನೆಯ ಸೈನಿಕರಿಗಾಗಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಭಾರತೀಯ ಯೋಧರು ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಧ್ವಜ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಪ್ರತಿವರ್ಷ ಈ ವಿಶೇಷ ದಿನದಂದು ಸಾರ್ವಜನಿಕರಿಗೆ ಧ್ವಜಗಳನ್ನು ಹಂಚುವ ಮೂಲಕ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆಯನ್ನು ಸಂಗ್ರಹಿಸಲಾಗುತ್ತದೆ.
ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಮಹತ್ವ:
ಭಾರತೀಯ ಭೂ ಸೇನೆ, ಭಾರತೀಯ ವಾಯು ಪಡೆ ಮತ್ತು ಭಾರತೀಯ ನೌಕಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಯೋಧರ ಶೌರ್ಯ, ತ್ಯಾಗ ಮತ್ತು ಸಮರ್ಪಣೆಯನ್ನು ಗೌರವಿಸಲು ಮತ್ತು ಯೋಧರ ಹಾಗೂ ಅವರ ಕುಟುಂಬದ ಕಲ್ಯಾಣಕ್ಕಾಗಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಈ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಸಶಸ್ತ್ರ ಪಡೆಗಳ ಧ್ವಜ ದಿನವನ್ನು ದೇಶದ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತದೆ. ಹೌದು ದೇಶದ ಎಲ್ಲಾ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸೇರಿದಂತೆ ಸಾಮಾನ್ಯ ನಾಗರಿಕರು ಸಹ ಧ್ವಜವನ್ನು ಖರೀದಿಸುವ ಮೂಲಕ ದೇಣಿಗೆ ನೀಡುತ್ತಾರೆ.




