ಗದಗ : ನಟ ಯಶ್ ಅವರನ್ನು ನೋಡುವ ಭರದಲ್ಲಿ ಸ್ಕೂಟಿಯನ್ನು ವೇಗವಾಗಿ ಚಲಾಯಿಸುತ್ತಿದ್ದ. ಈ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಸೋಮವಾರ ರಾತ್ರಿ ಗಾಯಗೊಂಡಿದ್ದ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವಿಗಿಡಾಗಿದ್ದಾನೆ.
ಗದಗ ತಾಲೂಕಿನ ಬಿಂಕದಕಟ್ಟಿ ನಿವಾಸಿ ನಿಖಿಲಗೌಡ ಭೀಮನಗೌಡ ಗೌಡರ ಮೃತ ಯುವಕ. ಸೋಮವಾರ ಮುಳುಗುಂದ ರಸ್ತೆಯಲ್ಲಿ ಉಂಟಾದ ಅಪಘಾತದಲ್ಲಿ ಗಾಯಗೊಂಡು ಜೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ನಿಖಿಲಗೌಡ ಲಕ್ಷ್ಮೇಶ್ವರದ ಅಗಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ನಿನ್ನೆ ಯಶ್ ನೋಡಲು ಸೂರಣಗಿ ಗ್ರಾಮಕ್ಕೆ ತೆರಳಿದ ಎನ್ನಲಾಗಿದೆ. ಆದರೆ, ಅಲ್ಲಿ ಯಶ್ ನೋಡಲು ಆಗಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಯಶ್ ಜನ್ಮದಿನದಂದೇ ನಾಲ್ವರು ಅಭಿಮಾನಿಗಳು ಸಾವಿಗಿಡಾಗಿದ್ದು ದುರಂತವೇ ಆಗಿದೆ.