ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಬುಧುವಾರ ನಡೆದ ಸಭೆಯಲ್ಲಿ ದರ ಪರಿಷ್ಕರಣೆಗೆ ಸಮ್ಮತಿ ನೀಡಲಾಗಿದೆ. ಎಲ್ಲಾ ಆಟೋ ಚಾಲಕ ಸಂಘಟನೆಗಳು ದರ ಏರಿಕೆಗೆ ಸಮ್ಮತಿ ಸೂಚಿಸಿವೆ. ಒಂದು ವಾರದ ವರೆಗೆ ಆಟೋ ಚಾಲಕ ಸಂಘಟನೆಗಳ ಅಭಿಪ್ರಾಯಕ್ಕೆ ಅವಕಾಶ ನೀಡಲಾಗಿದೆ.
ಚಾಲಕ ಸಂಘಟನೆಗಳು ಸಭೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿಗಳು ಎಷ್ಟು ದರ ಏರಿಕೆ ಮಾಡಬೇಕೆಂದು ಘೋಷಣೆ ಮಾಡಲಿದ್ದಾರೆ.
ಆಟೋ ಚಾಲಕ ಸಂಘಟನೆಗಳು ಕನಿಷ್ಠ ದರವನ್ನು 10 ರೂಪಾಯಿಯಷ್ಟು ಹೆಚ್ಚಳ ಮಾಡಬೇಕೆಂದು ಈಗಾಗಲೇ ಮನವಿ ಮಾಡಿವೆ. ಸದ್ಯ ಬೆಂಗಳೂರಲ್ಲಿ ಆಟೋ ಮೀಟರ್ ಕನಿಷ್ಠ ದರ 30ರೂಪಾಯಿ ಇದೆ. ಅದನ್ನು 40 ರೂ. ವರೆಗೆ ಏರಿಕೆ ಮಾಡಲು ಮನವಿ ಸಲ್ಲಿಕೆ ಮಾಡಲಾಗಿದೆ.


