ಮೈಸೂರು: ಜಿಲ್ಲೆಯಲ್ಲಿ ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾರೆ.. ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದ್ದು, ದಂಡನಾಯ್ಕ ಅಲಿಯಾಸ್ ಸ್ವಾಮಿ(58) ಮೃತಪಟ್ಟಿದ್ದಾರೆ.
ರೈತನ ಮೇಲೆ ದಾಳಿ ನಡೆಸಿದ ಹುಲಿ ಜಮೀನಿನಲ್ಲಿ ಕೊಂದು ಅರ್ಧ ಕಿಲೋಮೀಟರ್ ದೂರ ಎಳೆದುಕೊಂಡು ಹೋಗಿ, ತಿಂದು ಹಾಕಿದೆ. ದೇ ರೈತ 8 ತಿಂಗಳ ಹಿಂದೆ ಆನೆ ದಾಳಿಗೆ ಒಳಗಾಗಿದ್ದ ಎನ್ನಲಾಗಿದೆ. ಪದೇ ಪದೇ ಹುಲಿ ದಾಳಿ ಹಿನ್ನಲೆ ಕಾಡಂಚಿನ ಗ್ರಾಮದ ನಿವಾಸಿಗಳು ಕಂಗಾಲಾಗಿದ್ದು, ಕೆಲಸಕ್ಕೆ ಹೋಗಲೂ ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹುಲಿ ದಾಳಿಯಿಂದ ಈಗಾಗಲೇ ಹಲವು ರೈತರು ಪ್ರಾಣ ಕಳೆದುಕೊಂಡಿದ್ದಾರೆ..
ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳ ಮೇಲೂ ವ್ಯಾಘ್ರ ದಾಳಿ ನಡೆಸುತ್ತಿದ್ದು ಮೇಯಲು ಹೋದ ಪ್ರಾಣಿಗಳ ಜೊತೆಗೆ, ಕೊಟ್ಟಿಗೆಗೂ ನುಗ್ಗಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ನಂಜನಗೂಡು ತಾಲೂಕಿನ ಉಪ್ಪನಹಳ್ಳಿಯಲ್ಲಿ ರೈತ ಸಣ್ಣಮಾದಯ್ಯ ಎಂಬವರಿಗೆ ಸೇರಿದ ಕೊಟ್ಟಿಗೆಗೆ ನುಗ್ಗಿದ್ದ ಹುಲಿ ಮೇಕೆಯನ್ನು ಕೊಂದು ತಿಂದಿತ್ತು. ಮೈಸೂರು ಭಾಗದಲ್ಲಿ ನಿರಂತರ ಹುಲಿ ದಾಳಿ ಪ್ರಕರಣ ಹಿನ್ನಲೆ ಅರಣ್ಯ ಇಲಾಖೆ ವಿರುದ್ಧ ಈಗಾಗಲೇ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ.


