ಸುದ್ದಿ

ರಾಮನವಮಿಯಂದೇ ದ್ವಾರಕೆ ತಲುಪಿದ ಅನಂತ್​ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕ ಹಾಗೂ ಖ್ಯಾತ ಉದ್ಯಮಿ ಮುಕೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಕಳೆದ ಮಾರ್ಚ್‌ 29ರಂದು ತೀರ್ಥಯಾತ್ರೆ ಹೊರಟಿದ್ದರು. ರಿಲಯನ್ಸ್ ಇಂಡಸ್ಟ್ರೀಸ್‌ನ ನಿರ್ದೇಶಕ ಅನಂತ್ ಅಂಬಾನಿ ಅವರು ತಮ್ಮ 30ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಜಾಮ್‌ನಗರದಿಂದ ದ್ವಾರಕದ ದ್ವಾರಕಾಧೀಶ ದೇವಸ್ಥಾನದವರೆಗೆ 170 ಕಿಲೋಮೀಟರ್ ದೂರದ ಪಾದಯಾತ್ರೆಯನ್ನು ಯಶಸ್ವಿಯಾಗಿ ಇಂದು (ಏಪ್ರಿಲ್ 6) ಮುಗಿಸಿದರು. ಈ ಆಧ್ಯಾತ್ಮಿಕ ಯಾತ್ರೆಯು ಮಾರ್ಚ್ 29ರಂದು ಆರಂಭವಾಗಿ, ರಾಮನವಮಿಯ ಶುಭ ದಿನವಾದ ಇಂದು ಅಂದರೆ ಏಪ್ರಿಲ್ 6ರಂದು ದ್ವಾರಕಾದಲ್ಲಿ ಕೊನೆಗೊಂಡಿತು. ಈ ಪಾದಯಾತ್ರೆಯಲ್ಲಿ ಅವರ ತಾಯಿ ನೀತಾ ಅಂಬಾನಿ ಮತ್ತು ಪತ್ನಿ ರಾಧಿಕಾ ಮರ್ಚೆಂಟ್ ಕೂಡ ಕೊನೆಯ ದಿನದಂದು ಸೇರಿಕೊಂಡರು.

ಅನಂತ್ ಅಂಬಾನಿ ಈ ಯಾತ್ರೆಯನ್ನು ತಮ್ಮ ಆಧ್ಯಾತ್ಮಿಕ ಪ್ರಯಾಣ ಎಂದು ಕರೆದಿದ್ದಾರೆ. “ನಾನು ಈ ಯಾತ್ರೆಯನ್ನು ದೇವರ ಹೆಸರಿನಲ್ಲಿ ಶುರುಮಾಡಿದೆ ಮತ್ತು ದೇವರ ಹೆಸರಿನಲ್ಲಿಯೇ ಮುಗಿಸಿದೆ. ದ್ವಾರಕಾಧೀಶನಿಗೆ ಧನ್ಯವಾದಗಳು. ನನ್ನ ಜೊತೆಗೆ ಈ ಯಾತ್ರೆಯಲ್ಲಿ ಭಾಗಿಯಾದವರಿಗೆ ಕೃತಜ್ಞನಾಗಿದ್ದೇನೆ,” ಎಂದು ಅವರು ಹೇಳಿದರು.

ಈ ಯಾತ್ರೆಯಲ್ಲಿ ಅವರು ಪ್ರತಿದಿನ ಸುಮಾರು 20 ಕಿಲೋಮೀಟರ್ ದೂರವನ್ನು ರಾತ್ರಿಯಲ್ಲಿ ನಡೆದುಕೊಂಡು ಹೋಗಿದ್ದರು. ದಾರಿಯಲ್ಲಿ ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರಗಳನ್ನು ಪಠಿಸುತ್ತಾ ದ್ವಾರಕಾಕ್ಕೆ ತಲುಪಿದ್ದಾರೆ.

Comments (0)

Your email address will not be published. Required fields are marked *

Back to top button