ಬೀದರ್: ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ನೀಡಿರುವ ಹೇಳಿಕೆ ಖಂಡನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ಧಾರೆ..
ಜನರಿಂದ ತಿರಸ್ಕೃತನಾಗಿ, ಕೆಲಸವಿಲ್ಲದೆ ಬೀದಿ ಬೀದಿ ಅಲೆದಾಡುತ್ತಿರುವ ಖೂಬಾ, ಸಾಂವಿಧಾನಿಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ ಮುಖ್ಯಮಂತ್ರಿಯನ್ನು ಅರ್ಬನ್ ನಕ್ಸಲ್ ಎಂದು ಕರೆಯುವ ಮಟ್ಟಕ್ಕೆ ಇಳಿದಿರುವುದು ಅತ್ಯಂತ ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹತ್ತು ವರ್ಷ ಸಂಸದರಾಗಿ, ನಂತರ ಕೇಂದ್ರ ಸಚಿವರಾಗಿ ಜವಾಬ್ದಾರಿಯ ಹುದ್ದೆಯಲ್ಲಿ ಇದ್ದರೂ ಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ. ಕೋವಿಡ್ ಸಮಯದಲ್ಲಿ ಜನರು ಆಸ್ಪತ್ರೆಯ ಹಾಸಿಗೆ ಸಿಗದೆ, ಔಷಧಗಳಿಗಾಗಿ ನರಳುತ್ತಿದ್ದಾಗ ಸಹಾಯ ಮಾಡಲು ಬರದೆ, ಹೇಡಿಯಂತೆ ಅಡಗಿಕೊಂಡರು. ರೆಮಿಡಿ ಸಿವೀರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಜನರ ಕಣ್ಣೀರನ್ನು ಒರೆಸಲಿಲ್ಲ ಎಂದಿದ್ದಾರೆ.
ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿಗಳ ಮೂಲಕ ಬಡವರ ಬದುಕಿನಲ್ಲಿ ಹೊಸ ಬೆಳಕು ತಂದಿದ್ದಾರೆ. ಇಂತಹ ನಾಯಕನ ಬಗ್ಗೆ ನೀಚವಾಗಿ ಮಾತನಾಡುವುದು ಜನತೆಯ ವಿರೋಧಿ ಮನೋಭಾವ ಎಂದು ಹೇಳಿದ್ದಾರೆ. ಖಾಲಿ ಡಬ್ಬ ಸದಾ ಹೆಚ್ಚು ಶಬ್ದ ಮಾಡುತ್ತದೆ ಎಂಬ ಗಾದೆಯಂತೆ, ಜನರಿಂದ ತಿರಸ್ಕೃತ ಖೂಬಾ ಪ್ರತಿದಿನ ಪತ್ರಿಕಾ ಹೇಳಿಕೆಗಳ ಮೂಲಕ ಕಾಲ ಕಳೆಯುತ್ತಿದ್ದಾರೆ ಎಂದು ಖೂಬಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..


