ಹುಬ್ಬಳ್ಳಿ: ಅಂಬೇಡ್ಕರ್ ಅವರ ಆದರ್ಶಗಳು ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ. ಅಂಬೇಡ್ಕರ್ ತತ್ವ-ಸಿದ್ಧಾಂತಗಳನ್ನು ಬದಲಾವಣೆ ಮಾಡುವ ಹುಚ್ಚು ಸಾಹಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಗರನ್ನು ಧಾರವಾಡ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ದಿಂಗಾಲೇಶ್ವರ ಶ್ರೀ ಕುಟುಕಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ಬದಲಾವಣೆ ಮಾಡಬೇಕು. ಬದಲಾಯಿಸುವ ಕಾಲ ಸಮೀಪದಲ್ಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅದು ಅಸಾಧ್ಯ. ಸೂರ್ಯ ಚಂದ್ರರು ಇರುವವರೆಗೆ ಅಂಬೇಡ್ಕರ್ ಅವರ ತತ್ವಾದರ್ಶ, ಸಂವಿಧಾನ ಇರುತ್ತದೆ ಎಂದರು.

ಎಸ್ಸಿ, ಎಸ್ಟಿ, ಹಿಂದುಳಿದವರ, ಅಂಬೇಡ್ಕರ್ ಅನುಯಾಯಿಗಳ ಮತ ಸೆಳೆಯಲು ಕೆಲವರು ಅಂಬೇಡ್ಕರ್ ಅವರನ್ನು ತೋರಿಕೆಗಾಗಿ ಗುಣಗಾನ ಮಾಡುತ್ತಿದ್ದಾರೆ. ಇಂತಹ ಕುತ್ಸಿತ ಮನಸ್ಥಿತಿಯ ಜನರನ್ನು ನಾವೆಲ್ಲ ದೂರ ಇರಿಸಬೇಕು. ಕೆಲವರು ಸೇರಿಕೊಂಡು ಅಂಬೇಡ್ಕರ್, ವಾಲ್ಮೀಕಿ ಅವರನ್ನು ತುಳಿದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರಿಗೆಲ್ಲ ಈ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಶಿಗ್ಗಾವಿ, ಸವಣೂರಿನಲ್ಲಿ ಸಭೆ: ಕ್ಷೇತ್ರದ ಹಾಗೂ ಹೊರಗಿನ ಜನರಿಂದ ನನಗೆ ಅಭೂತ ಪೂರ್ವ ಬೆಂಬಲ ಸಿಗುತ್ತಿದೆ. ಬಿಡುವಿಲ್ಲದೇ ಕ್ಷೇತ್ರದದ್ಯಾಂತ ಸಂಚರಿಸಿ ಮತಯಾಚನೆ ಮಾಡುತ್ತಿದ್ದೇವೆ. ಶಿಗ್ಗಾವಿ, ಸವಣೂರಿನಲ್ಲಿ ಬೃಹತ್ ಸಭೆ ಕರೆದಿದ್ದೇವೆ. ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ನಮ್ಮ ಗೆಲವಿನ ಹಾದಿಯತ್ತ ಹೋಗುತ್ತಿದ್ದೇವೆ.


