ಬೆಂಗಳೂರು: ಇತ್ತಿಚೇಗೆ ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿರುವ ವಿಚಾರ ದೆಶದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಮೊಟ್ಟೆ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಆಗಿತ್ತು. ಇದೀಗ ಈ ವಿಚಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರತಿಕ್ರಿಯಿಸಿದ್ದು, ಈ ಹಿಂದೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆ ಹಾನಿಕಾರಕ ಅಂಶಗಳು ಕಂಡುಬಂದಿಲ್ಲ. ಆದರೆ, ಈ ಹೊಸ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್‌ಗಳಲ್ಲಿ ಕೂಲಂಕುಷ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶದ ವಿಚಾರಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತಾಡಿದ್ದಾರೆ. ಮೊನ್ನೆ ಎಗಾಸ್ ಕಂಪನಿಯ ಮೊಟ್ಟೆಯಲ್ಲಿ ಉಪಯೋಗ ಮಾಡಬಾರದ ಆ್ಯಂಟಿಬಯೋಟೆಕ್ ಬಳಕೆ ಬಗ್ಗೆ ಮಾಹಿತಿ ಬಂದಿತ್ತು. ಇದರ ಬಗ್ಗೆ ಸ್ಪಷ್ಟವಾದ ವಿಚಾರ ತಿಳಿದುಕೊಳ್ಳಲು ಇಲಾಖೆಯವರಿಗೆ ಹೇಳಿದ್ದೇನೆ ಎಂದಿದ್ದಾರೆ.
ಯಾಕಂದ್ರೆ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿ ಈಗ ಎದ್ದಿರುವ ಗೊಂದಲ ಇದ್ರೆ ನಾವು ತಿಳಿದುಕೊಳ್ಳಬೇಕಾಗುತ್ತದೆ. ನಾನು ನಮ್ಮ ಇಲಾಖೆಗೆ ಹೇಳಿದ್ದು, ಈಗಾಗಲೇ ಎಗಾಸ್ ಕಂಪನಿ ಮೊಟ್ಟೆಗಳ ಸ್ಯಾಂಪಲ್ ಗಳನ್ನ ತೆಗೆದುಕೊಂಡಿದ್ದಾರೆ. ಟೆಸ್ಟ್ ಮಾಡಿದ ನಂತರ, ಈ ವಿಚಾರವನ್ನ ತಮ್ಮ ಮುಂದೆ ಇಡುವೆ. ಈ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ 125 ಮೊಟ್ಟೆಯ ಸ್ಯಾಂಪಲ್ ಟೆಸ್ಟ್ ಮಾಡಿದ್ದೇವೆ. ಅದರಲ್ಲಿ 123 ಮೊಟ್ಟೆಗಳ ಸ್ಯಾಂಪಲ್ ಗುಣಮಟ್ಟ ಸರಿಯಿದೆ. ಒಂದು, ಎರಡು ಮೊಟ್ಟೆಯ ಸ್ಯಾಂಪಲ್ ಮಾತ್ರ ಸರಿಯಿಲ್ಲ ಎಂದು ಬಂದಿತ್ತು. ಇದ್ರಿಂದ ಯಾವುದೋ ಒಂದು ಸುದ್ದಿ ಕೇಳಿ ಆತಂಕ, ಭಯಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ತಿಳಿಸಿದ್ದಾರೆ.
ಮೊಟ್ಟೆ ತೆಗೆದುಕೊಳ್ಳೋದು ಬೇಡ ಅಂತಲ್ಲ, ವರದಿ ಬರುವವರೆಗೂ ಕಾಯೋಣ. ರಿಪೋರ್ಟ್ ಬರಬೇಕು, ಬಂದ ಬಳಿಕ ಎಲ್ಲವೂ ಗೊತ್ತಾಗುತ್ತೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


