ಬಾಲಿವುಡ್‌ನ ಜನಪ್ರಿಯ ನಟ ಅಭಿಷೇಕ್ ಬಚ್ಚನ್ ಇಂದು ತಮ್ಮ 50ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಮೈಲಿಗಲ್ಲಿನ ಸಂದರ್ಭದಲ್ಲಿ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಂಚಿಕೊಂಡಿರುವ ಭಾವುಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.
ಇತ್ತೀಚಿನ ದಿನಗಳಲ್ಲಿ ಈ ದಂಪತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಊಹಾಪೋಹಗಳಿಗೆ ಐಶ್ವರ್ಯಾ ಅವರ ಈ ಪೋಸ್ಟ್ ಬಲವಾದ ಉತ್ತರ ನೀಡಿದಂತಿದೆ.ಐಶ್ವರ್ಯಾ ರೈ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಕಣ್ಣುಗಳು ಮಾತ್ರ ಕಾಣಿಸುವ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. “ಪ್ರೀತಿಯ ಬೇಬಿ-ಪಪ್ಪಾ, ನಿಮಗೆ 50ನೇ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಪ್ರೀತಿ, ಶಾಂತಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ. ಬಂಗಾರವಾಗಿರಿ, ಪ್ರೀತಿಯಲ್ಲಿ ಮಿಂಚಿರಿ” ಎಂದು ಬರೆಯುವ ಮೂಲಕ ಪತಿಯ ಮೇಲಿರುವ ಅತೀವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದೇಶವು ದಂಪತಿಗಳ ನಡುವಿನ ವಿಚ್ಛೇದನದ ವದಂತಿಗಳಿಗೆ ತೆರೆ ಎಳೆದಿದೆ.
ಅಭಿಷೇಕ್ ಅವರ ತಂದೆ, ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಮಗನ 50ನೇ ವಸಂತಕ್ಕೆ ಮನದಾಳದ ಹಾರೈಕೆಗಳನ್ನು ತಿಳಿಸಿದ್ದಾರೆ. ಅಭಿಮಾನಿಗಳು ತೋರುತ್ತಿರುವ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದ ಸಲ್ಲಿಸಿರುವ ಅವರು, ಈ ಆಶೀರ್ವಾದಗಳೇ ಮಗನಿಗೆ ಮುಂದುವರಿಯಲು ಶಕ್ತಿ ನೀಡುತ್ತವೆ ಎಂದಿದ್ದಾರೆ.
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದ ಅಭಿಷೇಕ್ ಬಚ್ಚನ್, ವಿಚ್ಛೇದನದ ಸುದ್ದಿಗಳು ಕೇವಲ ಅಸಂಬದ್ಧ ಊಹಾಪೋಹಗಳು ಎಂದು ಕಿಡಿಕಾರಿದ್ದರು. ಈಗ ಐಶ್ವರ್ಯಾ ಅವರ ಈ ವಿಶೇಷ ಹುಟ್ಟುಹಬ್ಬದ ವಿಶ್ ಅವರ ಅಭಿಮಾನಿಗಳಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.


