ದೇಶ/ವಿದೇಶ

ಥೈಲ್ಯಾಂಡ್‌ನಲ್ಲಿ ಏರ್ ಇಂಡಿಯಾ ವಿಮಾನ ಭೀಕರ ದುರಂತದಿಂದ ಸೇಫ್!

ಹೈದರಾಬಾದ್‌ನಿಂದ ಥೈಲ್ಯಾಂಡ್‌ನ ಫುಕೆಟ್‌ಗೆ ಹಾರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಲ್ಯಾಂಡಿಂಗ್ ವೇಳೆ ಭೀಕರ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಬೋಯಿಂಗ್ 737-ಮ್ಯಾಕ್ಸ್8 ಮಾದರಿಯ ಈ ವಿಮಾನವು ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಅದರ ‘ನೋಸ್ ವೀಲ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ವಿಮಾನದ ಮುಂಭಾಗದ ಚಕ್ರವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೂ, ಪೈಲಟ್ ಅತ್ಯಂತ ಚಾಣಾಕ್ಷತನದಿಂದ ವಿಮಾನವನ್ನು ಸುರಕ್ಷಿತವಾಗಿ ರನ್‌ವೇ ಮೇಲೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ವಿಮಾನದಲ್ಲಿದ್ದ ಎಲ್ಲಾ 133 ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಈ ಘಟನೆಯ ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಫುಕೆಟ್ ಏರ್‌ಪೋರ್ಟ್‌ನ ರನ್‌ವೇಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ವಿಮಾನವು ರನ್‌ವೇ ಮಧ್ಯದಲ್ಲೇ ಸಿಲುಕಿಕೊಂಡಿರುವುದರಿಂದ ಅದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದಾಗಿ ಫುಕೆಟ್‌ಗೆ ಆಗಮಿಸಬೇಕಿದ್ದ ಹಾಗೂ ಅಲ್ಲಿಂದ ಹೊರಡಬೇಕಿದ್ದ ಹಲವಾರು ಅಂತರಾಷ್ಟ್ರೀಯ ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ. ಮಾರ್ಚ್ 11 ರ ಬೆಳಿಗ್ಗೆ 6:42ಕ್ಕೆ ಹೈದರಾಬಾದ್‌ನಿಂದ ಟೇಕ್ ಆಫ್ ಆಗಿದ್ದ ಈ ವಿಮಾನವು ಸ್ಥಳೀಯ ಕಾಲಮಾನ 11:40ಕ್ಕೆ ಫುಕೆಟ್ ತಲುಪಿದಾಗ ಈ ತಾಂತ್ರಿಕ ಸವಾಲು ಎದುರಾಯಿತು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾನದ ಲ್ಯಾಂಡಿಂಗ್ ಗೇರ್ ವ್ಯವಸ್ಥೆಯಲ್ಲಿ ‘ನೋಸ್ ವೀಲ್’ ಅತ್ಯಂತ ಪ್ರಮುಖ ಭಾಗವಾಗಿದ್ದು, ವಿಮಾನವನ್ನು ರನ್‌ವೇ ಮೇಲೆ ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಒಂದು ವೇಳೆ ಲ್ಯಾಂಡಿಂಗ್ ವೇಳೆ ಇದು ಸಂಪೂರ್ಣವಾಗಿ ವಿಫಲವಾಗಿದ್ದರೆ ವಿಮಾನವು ರನ್‌ವೇಯಿಂದ ಹೊರಕ್ಕೆ ಜಾರುವ ಅಥವಾ ಬೆಂಕಿ ಹೊತ್ತಿಕೊಳ್ಳುವ ಅಪಾಯವಿತ್ತು. ಸದ್ಯ ವಿಮಾನದ ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಜೆವರೆಗೂ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎಂದು ಸಂಸ್ಥೆ ಹೇಳಿದೆ.

Comments (0)

Your email address will not be published. Required fields are marked *

Back to top button