64 ವರ್ಷಗಳ ಬಳಿಕ ಇಂದು ಮತ್ತು ನಾಳೆ ಗುಜರಾತ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಮಹತ್ವದ ಸಭೆ ನಡೆಯಲಿದೆ.
ಇಂದು ಮತ್ತು ನಾಳೆ ರಾಷ್ಟ್ರಮಟ್ಟದಲ್ಲಿ ಮಹತ್ವದ ಅಧಿವೇಶನ ನಡೆಯಲಿದೆ. ಶಾಹಿಬಾಗ್‌ನಲ್ಲಿರುವ ಐತಿಹಾಸಿಕ ಸರ್ದಾರ್ ಸ್ಮಾರಕದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ ಶಿವಕುಮಾರ್ ಸೇರಿದಂತೆ 3,000ಕ್ಕೂ ಅಧಿಕ ನಾಯಕರು ಭಾಗಿಯಾಗಲಿದ್ದಾರೆ.
ಎಐಸಿಸಿ ಮಹಾ ಅಧಿವೇಶನದಲ್ಲಿ ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಲಿದ್ದು, ಪಕ್ಷದ ಪುನಶ್ಚೇತನಕ್ಕೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಸಂಘಟನೆ, ತಂತ್ರಗಾರಿಗೆ ಸಂಬಂಧ ಹಲವು ಆಯಾಮಗಳಲ್ಲಿ ಚರ್ಚೆ ನಡೆಯಲಿದ್ದು, ಮುಂಬರುವ ಚುನಾವಣೆಗೆ ಸಂಘಟನಾತ್ಮಕ ಕಾರ್ಯತಂತ್ರದ ಪರಿಷ್ಕರಣೆ ನಡೆಯಲಿದೆ. ಸಂಘಟನಾ ಅಧಿಕಾರದ ವಿಕೇಂದ್ರೀಕರಣ, ಮೈತ್ರಿ ನಿರ್ವಹಣೆ ಮತ್ತು ಸಾರ್ವಜನಿಕ ಸಂಪರ್ಕದ ಕುರಿತಾಗಿಯೂ ಚರ್ಚೆ ನಡೆಯಲಿದೆ. ಅಲ್ಲದೇ 2027ರ ವೇಳೆಗೆ ಗುಜರಾತ್‌ನಲ್ಲಿ ರಾಜಕೀಯ ನೆಲೆಯನ್ನು ಮರಳಿ ಪಡೆಯಲು ರೂಪರೇಷೆ ನಡೆಸಲಿದ್ದಾರೆ.
ಆರು ಪ್ರಮುಖ ರಾಜ್ಯಗಳ ಚುನಾವಣೆಗಳು ಸನ್ನಿಹಿತವಾಗುತ್ತಿರುವ ಹಿನ್ನೆಲೆ ಪ್ರಿಯಾಂಕಾ ಗಾಂಧಿಗೆ ಹೆಚ್ಚು ನೇರ ಮತ್ತು ರಚನಾತ್ಮಕ ಜವಾಬ್ದಾರಿ ನೀಡುವ ಬಗ್ಗೆ ಸಮಾಲೋಚನೆ ನಡೆಯಲಿದೆ. ಸದ್ಯ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ಯಾವುದೇ ನಿರ್ದಿಷ್ಟ ಜವಬ್ದಾರಿ ಇಲ್ಲ. ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜವಬ್ದಾರಿ ನೀಡುವ ಬಗ್ಗೆ ಚರ್ಚೆ ನಡೆಯಲಿದೆ.