ಕ್ರೈಂ ಸ್ಟೋರಿರಾಜ್ಯ

ಬೆಂಗಳೂರು ಉತ್ತರ ಎಸಿ ಕಿರಣ್‌ಗೆ ತಲೆದಂಡದ ಭೀತಿ!

ಬೆಂಗಳೂರು: ರಾಜಧಾನಿಯ ಕಂದಾಯ ಇಲಾಖೆಯಲ್ಲಿ ಈಗ ಅಮಾನತಿನ ಭೀತಿ ಅಧಿಕಾರಿಗಳ ನಿದ್ದೆಗೆಡಿಸಿದೆ. ಬೆಂಗಳೂರು ದಕ್ಷಿಣ ಗ್ರೇಡ್‌-1 ತಹಶೀಲ್ದಾರ್ ಅಶ್ವಿನಿ ಜಿ. ಹಾಗೂ ವಿಶೇಷ ತಹಶೀಲ್ದಾರ್ ವರ್ಷಾ ವಡೆಯರ್ ಅವರನ್ನು ಸರ್ಕಾರ ಅಮಾನತು ಮಾಡಿದ ಬೆನ್ನಲ್ಲೇ, ಈಗ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ (AC) ಡಾ. ಕಿರಣ್ ಅವರ ಮೇಲೂ ಶಿಸ್ತು ಕ್ರಮದ ತೂಗುಗತ್ತಿ ನೇತಾಡುತ್ತಿದೆ. ನ್ಯಾಯಾಲಯದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಮತ್ತು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಈ ಅಧಿಕಾರಿಗಳ ವಿರುದ್ಧ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಕೋರ್ಟ್ ಕೇಸ್‌ಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಅಶ್ವಿನಿ ಮತ್ತು ವರ್ಷಾ ಅವರಿಗೆ ಹೈಕೋರ್ಟ್ ಈ ಹಿಂದೆ ಭಾರಿ ಛೀಮಾರಿ ಹಾಕಿತ್ತು. ಇದೇ ಹಾದಿಯಲ್ಲಿರುವ ಎಸಿ ಕಿರಣ್ ಅವರ ಕಾರ್ಯವೈಖರಿ ಬಗ್ಗೆಯೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳ ಈ ಅಧ್ವಾನಗಳಿಂದ ನ್ಯಾಯಾಂಗ ವ್ಯವಸ್ಥೆಗೆ ತೊಂದರೆಯಾಗುತ್ತಿದ್ದು, ಇವರನ್ನು ಕೂಡಲೇ ಅಮಾನತು ಮಾಡಬೇಕೆಂದು ಅಡ್ವೊಕೇಟ್ ಜನರಲ್ (AG) ಸರ್ಕಾರಕ್ಕೆ ಪತ್ರ ಬರೆದಿರುವುದು ಈಗ ಕಂದಾಯ ಇಲಾಖೆಯಲ್ಲಿ ಭಾರಿ ನಡುಕ ಹುಟ್ಟಿಸಿದೆ.
ಅಡ್ವೊಕೇಟ್ ಜನರಲ್ ಅವರ ಪತ್ರವು ಅಧಿಕಾರಿಗಳ ಭ್ರಷ್ಟಾಚಾರ ಅಥವಾ ನಿರ್ಲಕ್ಷ್ಯದ ವಿರುದ್ಧದ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಎಸಿ ಕಿರಣ್ ಅವರ ವಿರುದ್ಧದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಯಾವುದೇ ಕ್ಷಣದಲ್ಲಿ ಅಮಾನತು ಆದೇಶ ಹೊರಡಿಸುವ ಸಾಧ್ಯತೆಯಿದೆ. ಈ ಬೆಳವಣಿಗೆಯಿಂದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಭಾಗದ ತಹಶೀಲ್ದಾರ್‌ಗಳು ಹಾಗೂ ಕಂದಾಯ ಸಿಬ್ಬಂದಿ ಕಂಗಾಲಾಗಿದ್ದು, ನ್ಯಾಯಾಲಯದ ಫೈಲ್‌ಗಳನ್ನು ವಿಲೇವಾರಿ ಮಾಡಲು ಈಗ ಹರಸಾಹಸ ಪಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button