ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಹಲವು ಆಹಾರ ಹಾಗೂ ವಸ್ತುಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಹಾಳೆ ಬಳಕೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಪರೀಕ್ಷೆಯಿಂದ ದೃಢಪಟ್ಟಿದೆ. ಇದರ ಬೆನ್ನಲ್ಲೇ ಟ್ಯಾಟೂ, ಲಿಪ್ ಸ್ಟಿಕ್ ನಿಂದ ಎಚ್ಐವಿ ಹಾಗೂ ಚರ್ಮ ರೋಗ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇದೀಗ ಮೆಹಂದಿ ಸರದಿ, ಇದರಿಂದ ಚರ್ಮ ರೋಗ, ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಟ್ಯಾಟೂ ಮತ್ತು ಲಿಪ್ ಸ್ಟಿಕ್ ನಂತರ ಈಗ ಮೆಹಂದಿಯಿಂದಲೂ ಅಪಾಯ ಎದುರಾಗಿದೆ. ಕಳಪೆ ಗುಣಮಟ್ಟದ ಮೆಹಂದಿಯಿಂದ ಚರ್ಮ ರೋಗಗಳು ಬರುತ್ತಿವೆ ಎಂಬ ಆತಂಕ ಹೆಚ್ಚುತ್ತಿದೆ. ಕೆಲವು ಮೆಹಂದಿಗಳಲ್ಲಿ ಅಪಾಯಕಾರಿ ಅಂಶಗಳು ಇರುವುದರಿಂದ ಚರ್ಮದ ಮೇಲೆ ಅಲರ್ಜಿ, ಕೆರೆತ, ಗಾಯಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನಲೇ ಆರೋಗ್ಯ ಇಲಾಖೆ ಮೆಹಂದಿಗೂ ಕಡಿವಾಣ ಹಾಕಲು ಚಿಂತನೆ ನಡೆಸಿದೆ.