ಬೆಂಗಳೂರು: ಈಗಷ್ಟೇ 2024ರ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಸರ್ಕಾರ ರಚನೆಗೆ ತಯಾರಿಗಳು ಆರಂಭವಾಗಿವೆ. ಈ ಮಧ್ಯೆ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಹಂಚಿಕೊಂಡಿರುವ ಒಂದು ಪೋಸ್ಟ್ ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಉಪೇಂದ್ರ ಈ ಪೋಸ್ಟ್ ಹಾಕುವುದಕ್ಕೆ ಕಾರಣವಾಗಿದ್ದು ತೆಲುಗು ನಟ ಪವನ್ ಕಲ್ಯಾಣ್ ಜನಸೇನಾ ಪಾರ್ಟಿಯ ಗೆಲುವು.
ವೈರಲ್ ಆಯ್ತು ಮೀಮ್
ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆದುಕೊಂಡಿದೆ. ಹಾಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹರಿದಾಡುತ್ತಿದೆ. ಅದರಲ್ಲಿ ಏನಿದೆ ಎಂದರೆ, ‘ಪವನ್ ಕಲ್ಯಾಣ್ ಅವರನ್ನು ಗೆಲ್ಲಿಸಲು ತೆಲುಗು ಜನ 14 ವರ್ಷ ತೆಗೆದುಕೊಂಡರು. ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಇನ್ನು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ’ ಎಂದು ಬರೆಯಲಾಗಿದೆ.
ವಾಹ್ ಪ್ರಜಾಪ್ರಭುಗಳೇ ವಾಹ್…
ಇದನ್ನೇ ಶೇರ್ ಮಾಡಿಕೊಂಡಿರುವ ಉಪೇಂದ್ರ, ಸಖತ್ ವ್ಯಂಗ್ಯವಾಗಿ ಒಂದು ಪೋಸ್ಟ್ ಹಾಕಿದ್ದಾರೆ. “ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ಉಪೇಂದ್ರ ಸೋಲು ಗೆಲುವು ಬಗ್ಗೆ ತುಂಬಾ ಚಿಂತೆ ಮಾಡುತ್ತಿದ್ದೀರಿ.. ಎಂಥ ನಿಸ್ವಾರ್ಥ, ಎಂಥ ತ್ಯಾಗ ಮನೋಭಾವ.. ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ.. ಡೋಂಟ್ ವರೀ… ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ, ಗೆದ್ದೇ ಗೆಲ್ತೀನಿ..” ಎಂದು ಉಪೇಂದ್ರ ಹೇಳಿದ್ದಾರೆ.
ನೀವು ಎಮೋಸನಲ್ ಪ್ರಚಾರ ಮಾಡ್ರೀ
“ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ. ಮುಂದಿನ ಎಲೆಕ್ಷನ್‌ನಲ್ಲಿ ನನಗ್ ಕೆಲಸ ಕೊಡ್ತೀರಾ ಅಂದ್ರೆ ನಿಲ್ತೀನಿ. ಆಗ್ಲೂ ನೀವು ಎಮೋಸನಲ್ ಪ್ರಚಾರ ಮಾಡ್ರೀ.. ಸಭೆ ಸಮಾರಂಭ ಎಲ್ಲಾ ಮಾಡ್ರೀ.. ಕಷ್ಟ ಪಡ್ರೀ.. ಆಮೇಲ್ ಐದು ವರ್ಷ ನೀವೇನ್ ಬೇಕಾದ್ರೂ ಮಾಡ್ಕಳಿ ನಾವ್ ಕೇಳಕ್ ಬರಲ್ಲ ಅಂದ್ರೆ… ಉಸ್, ಏನ್ ಬರೀಬೇಕೋ ಗೊತ್ತಾಗ್ತಿಲ್ರಪ್ಪೋ.. ಈ ದಡ್ ನನ್ ಮಗಂಗೇ ಯಾವನಾದರೂ ಇನ್ಮೇಲೆ ಬುದ್ದಿವಂತ ಅಂದ್ರೆ ಅಷ್ಟೇ… ಸೆಂದಾಗಿರಕ್ಕಿಲ್ಲಾ…” ಎಂದು ವಿಡಂಬನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ, ಈ ಪೋಸ್ಟ್‌ನ ಅರ್ಥ ಏನೆಂದರೆ, ಜನರಿಗೆ ಇನ್ನೂ ಕೂಡ ಪ್ರಜಾಕೀಯ ಪರಿಕಲ್ಪನೆ ಅರ್ಥವಾಗಿಲ್ಲ ಎಂಬುದು. ಪ್ರಜಾಕೀಯ ಪಕ್ಷದ ಸಿದ್ದಾಂತಗಳನ್ನು ಅರ್ಥ ಮಾಡಿಕೊಳ್ಳದೇ, ಈಗಿರುವ ರಾಜಕೀಯ ವ್ಯವಸ್ಥೆಯ ಮಾದರಿಯಲ್ಲೇ ಉಪೇಂದ್ರ ಕೂಡ ಗೆಲ್ಲಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಹಾಗಾಗಿ, ಉಪೇಂದ್ರ ಅವರು ತಮ್ಮದೇ ರೀತಿಯಲ್ಲಿ ವಿಡಂಬನಾತ್ಮಕವಾಗಿ ಮತ್ತು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ಇನ್ನು, ಉಪೇಂದ್ರ ಅವರ ಈ ಪೋಸ್ಟ್‌ಗೂ ಕೂಡ ಸಾಕಷ್ಟು ಪರ-ವಿರೋಧ ಕಾಮೆಂಟ್ ಬಂದಿವೆ.
ಅಂದಹಾಗೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ನಟ ಉಪೇಂದ್ರ ಅವರ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಉಪೇಂದ್ರ ಅವರು ಮಾತ್ರ ಈವರೆಗೂ ಚುನಾವಣೆಗೆ ಸ್ಪರ್ಧಿಸಿಲ್ಲ ಅನ್ನೋದು ವಿಶೇಷ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com