ಅಮೆರಿಕದ ‘ಅನುಮತಿ’ ಹೇಳಿಕೆಗೆ ನಟ ಕಮಲ್ ಹಾಸನ್ ಖಡಕ್ ವಾರ್ನಿಂಗ್!

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ವಿನಾಯಿತಿ ಮತ್ತು ಅನುಮತಿ ನೀಡಿದ್ದೇವೆ ಎಂದು ಹೇಳಿರುವ ಹೇಳಿಕೆಗೆ ಬಹುಭಾಷಾ ನಟ ಕಮಲ್ ಹಾಸನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ನಿಮ್ಮ ಕೆಲಸ ಏನಿದೆಯೋ ಅದನ್ನಷ್ಟೇ ನೋಡಿಕೊಳ್ಳಿ” ಎಂದು ಎಕ್ಸ್ ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಾರ್ವಭೌಮ ರಾಷ್ಟ್ರಗಳ ನಡುವಿನ ಪರಸ್ಪರ ಗೌರವವೇ ಜಾಗತಿಕ ಶಾಂತಿಗೆ ಅಡಿಪಾಯ ಎಂದಿರುವ ಕಮಲ್ ಹಾಸನ್, ಭಾರತವು ಎಂದಿಗೂ ಇತರ ದೇಶಗಳ ಆದೇಶಗಳಿಗೆ ತಲೆಬಾಗುವುದಿಲ್ಲ. ಅಮೆರಿಕ ತನ್ನ ದೇಶದ ಜನರ ಶಾಂತಿ ಮತ್ತು ಸಮೃದ್ಧಿಯ ಬಗ್ಗೆ ಗಮನ ಹರಿಸಲಿ, ಭಾರತದ ಆಂತರಿಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದಿದ್ದಾರೆ. ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ಕಮಲ್ ಹಾಸನ್ ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇತ್ತ ಭಾರತ ಸರ್ಕಾರವೂ ಅಮೆರಿಕದ ಈ ಹೇಳಿಕೆಗೆ ಅತ್ಯಂತ ಖಡಕ್ ಆಗಿಯೇ ಉತ್ತರ ನೀಡಿದೆ. ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಯಾರ ಅನುಮತಿಯೂ ಬೇಕಿಲ್ಲ ಮತ್ತು ನಾವು ಅಂತಹ ಅನುಮತಿಗಳ ಮೇಲೆ ಎಂದಿಗೂ ಅವಲಂಬಿತರಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕದ ಅಧಿಕಾರಿಗಳ ಹೇಳಿಕೆಯು ಭಾರತದಂತಹ ಪ್ರಬಲ ಆರ್ಥಿಕತೆಯ ರಾಷ್ಟ್ರದ ಸ್ವಾಯತ್ತತೆಯನ್ನು ಪ್ರಶ್ನಿಸುವಂತಿದೆ ಎಂಬ ಆಕ್ರೋಶ ದೇಶಾದ್ಯಂತ ವ್ಯಕ್ತವಾಗುತ್ತಿದೆ.




