ಭೀಮಾ ತೀರದಲ್ಲಿ ಮತ್ತೊಮ್ಮೆ ರಕ್ತದೋಕುಳಿಯಾಗಿದ್ದು, ನಟೋರಿಯಸ್ ಹಂತಕ ಬಾಗಪ್ಪ ಹರಿಜನ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಾಗಪ್ಪ ಹರಿಜನ ಮಗಳು ಗಂಗೂಬಾಯಿ, ಪಿಂಟು ಅಲಿಯಾಸ್ ಪ್ರಕಾಶ್ ಮೇಲೆ ಕೊಲೆ ಆರೋಪ ಮಾಡಿ ದೂರು ನೀಡಿದ್ದಾಳೆ
ಬಾಗಪ್ಪ ಹರಿಜನ ಹತ್ಯೆಯಾದ ಬಳಿಕ ಪಿಂಟು ವಾಟ್ಸಪ್ ಸ್ಟೇಟಸ್ ಹಾಕಿದ್ದು, ಅದರಿಂದಲೇ ಅನುಮಾನ ಹೆಚ್ಚಾಗಿದೆ. ಪಿಂಟು ಬಾಗಪ್ಪ ಹತ್ಯೆ ಬೆನ್ನಲ್ಲೇ ತನ್ನ ಅಣ್ಣನಿಗೆ ಶ್ರದ್ಧಾಂಜಲಿ ಎಂದು ಸ್ಟೇಟಸ್ ಹಾಕಿದ್ದ. ಹೀಗಾಗಿ ಪಿಂಟುನಿಂದಲೇ ಬಾಗಪ್ಪ ಕೊಲೆಯಾಗಿದೆ ಎಂದು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಕೊಲಾಹಲ ಸೃಷ್ಟಿಸಿದ ಪಿಂಟು ಸ್ಟೇಟಸ್..
ಬಾಗಪ್ಪ ಹರಿಜನ ಹತ್ಯೆ ಸಂಬಂಧ ಪಿಂಟು ಅಗರಖೇಡ ಮೇಲೆ ಪ್ರತೀಕಾರದ ಆರೋಪ ಕೇಳಿ ಬಂದಿದೆ. ಪಿಂಟು ಬೇರೆ ಯಾರು ಅಲ್ಲ. ಕಳೆದ ವರ್ಷ ವಿಜಯಪುರದಲ್ಲಿ ಕೊಲೆಯಾದ ವಕೀಲ ರವಿ ಅಗರಖೇಡ್ ನ ಸಹೋದರ. ವಕೀಲ ರವಿ, ಬಾಗಪ್ಪನ ದೂರದ ಸಂಬಂಧಿಯಾಗಿದ್ದು, ರವಿ ಸಹೋದರ ಪಿಂಟು ಸೇಡು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.
ವಕೀಲ ರವಿ ಅಗರಖೇಡ್ ಕಳೆದ ವರ್ಷ ವಿಜಯಪುರ ಕೋರ್ಟ್‌ನಿಂದ ಹೋಗುವಾಗ ಇನ್ನೋವಾ ಕಾರು ಭಯಾನಕವಾಗಿ ಡಿಕ್ಕಿಯಾಗಿತ್ತು. ಸ್ಕೂಟಿಗೆ ಡಿಕ್ಕಿಯಾದ ಇನ್ನೋವಾ ಕಾರು ಸುಮಾರು 2 ಕಿಲೋ ಮೀಟರ್ವರೆಗೆ ರವಿಯನ್ನು ಎಳೆದೊಯ್ದಿತ್ತು. ಭೀಕರ ಅಪಘಾತದಲ್ಲಿ ವಕೀಲ ರವಿ ಅಗರಖೇಡ್ ಮೃತಪಟ್ಟಿದ್ದ.
ಇದೀಗ ಬಾಗಪ್ಪ ಹರಿಜನ್ ಹತ್ಯೆ ಬಳಿಕ ಪಿಂಟು ಅಣ್ಣ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಸ್ಟೇಟಸ್ ಹಾಕಿದ್ದಾನೆ. ಹೀಗಾಗಿ ರವಿ ಸಹೋದರ ಪಿಂಟು ಮೇಲೆ ಬಾಗಪ್ಪನ ಪುತ್ರಿ ಕೊಲೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ.