Tuesday, April 29, 2025
27.6 C
Bengaluru
LIVE
ಮನೆFREEDOM TALKರಾಜ್ಯದಲ್ಲಿ ಹನಿಟ್ರ್ಯಾಪ್ ಸದ್ದು - ಜನಪ್ರತಿನಿಧಿಗಳೇ ಟಾರ್ಗೆಟ್ ಯಾಕೆ..?

ರಾಜ್ಯದಲ್ಲಿ ಹನಿಟ್ರ್ಯಾಪ್ ಸದ್ದು – ಜನಪ್ರತಿನಿಧಿಗಳೇ ಟಾರ್ಗೆಟ್ ಯಾಕೆ..?

ಫ್ರೀಡಂ ಟಿವಿ ಸಂಪಾದಕೀಯ:

ಹನಿಟ್ರ್ಯಾಪ್.. ಇದು ಇತ್ತೀಚೆಗೆ ಸಮಾಜದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ಪದ.. ಆದರೆ ಇದು ಇಂದಿನದ್ದೇನೂ ಅಲ್ಲ. ಸಾವಿರಾರು ವರ್ಷಗಳಿಂದಲೂ ರಾಜ ಮಹಾರಾಜರ ಕಾಲದಲ್ಲೂ ಇನ್ನೊಬ್ಬರನ್ನ ಸಿಲುಕಿಸಲು ನಡೆದು ಬಂದಿದ್ದ ಒಂದು ತಂತ್ರಗಾರಿಕೆ. ಶತ್ರು ದೇಶದ ರಾಜನೋ, ಮಂತ್ರಿಯೋ, ಅಥವಾ ಸೈನಿಕನನ್ನೋ ಸುಂದರ ಮಹಿಳೆ ತನ್ನ ಮೈಮಾಟ ತೋರಿಸಿ ಆತನಿಂದ ಬೇಕಾದ ಮಾಹಿತಿಯನ್ನ ಪಡೆಯುತ್ತಿದ್ದಳು. ಆದರೆ ಈಗೇನಿದ್ರೂ ಹೈಟೆಕ್ ಯುಗ. ಇಷ್ಟು ದಿನ ಅಧಿಕಾರಿಗಳೋ, ಹಣವಂತರನ್ನೋ ಸುಲಿಗೆ ಮಾಡಲು ಈ ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಸಮಾಜದಲ್ಲಿ ಒಳ್ಳೊಳ್ಳೇ ಹೆಸರು ಮಾಡಿದವರನ್ನ ತಮ್ಮ ಖೆಡ್ಡಾಕ್ಕೆ ಬೀಳಿಸಿಕೊಳ್ಳಲು, ತಾವು ಹೇಳಿದಂತೆ ಕೇಳುವಂತೆ ಮಾಡಲು ಈ ಹನಿಟ್ರ್ಯಾಪ್ ಅನ್ನೋ ಅಸ್ತ್ರ ಹೆಚ್ಚಾಗಿ ಬಳಕೆ ಆಗ್ತಿದೆ. ಈ ಹನಿ ಟ್ರ್ಯಾಪ್ ಅನ್ನೋದು ಈಗ ವಿಧಾನಸೌಧದವರೆಗೂ ಬಂದು ನಿಂತಿದೆ.

2021ರಲ್ಲಿ ಉತ್ತರ ಕರ್ನಾಟಕ ಭಾಗದ ಅಂದಿನ ಪ್ರಭಾವಿ ಸಚಿವರೊಬ್ಬರ ಹನಿ ಟ್ರ್ಯಾಪ್ ಆಯಿತು. ಕಾಂಗ್ರೆಸ್​​ನಿಂದ ಬಿಜೆಪಿಗೆ ಬಂದ ಆ ಪ್ರಭಾವಿ ಒಂದೊಳ್ಳೇ ಖಾತೆಯನ್ನೇ ಪಡೆದಿದ್ದರು. ಆದರೆ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಳಕೆ ಆಗಿದ್ದೇ ಈ ಹನಿ ಟ್ರ್ಯಾಪ್ ಅನ್ನೋ ಅಸ್ತ್ರ..! ದೆಹಲಿಯಲ್ಲಿ, ಬೆಳಗಾವಿಯಲ್ಲಿ, ಗೆಸ್ಟ್ ಹೌಸ್​​​ನಲ್ಲಿ ಹೀಗೆ ಸಿಕ್ಕ ಸಿಕ್ಕಲ್ಲೆಲ್ಲಾ ಹಿಡನ್ ಕ್ಯಾಮೆರಾ ಇಡಲಾಯ್ತು. ಬಳಿಕ ಆ ಪ್ರಭಾವಿ ಮಂತ್ರಿ ಇದ್ದ ಮಂಚದ ಬಳಿ ಮಹಿಳೆಯನ್ನ ನೂಕಲಾಯ್ತು.. ಕಾಮದ ನಶೆಯಲ್ಲಿದ್ದ ಆ ಮಂತ್ರಿವರ್ಯ ಇದ್ಯಾವುದನ್ನೂ ಗಮನಿಸದೆ ಬಚ್ಚಿಟ್ಟಿದ್ದ ಕ್ಯಾಮೆರಾಮುಂದೆ ಬಟ್ಟೆ ಬಿಚ್ಚಿ ಬೆತ್ತಲಾಗಿಬಿಟ್ಟಿದ್ದರು. ವಿಡಿಯೋ ವೈರಲ್ ಆದ ಬಳಿಕ ಬಟ್ಟೆ ಬಿಚ್ಚಿ ನಗ್ನನಾಗಿದ್ದ ಆ ಸಚಿವ ರಾಜೀನಾಮೆ ಕೊಡಬೇಕಾಯ್ತು.

ಇದು ಕೇವಲ ಒಂದು ಉದಾಹರಣೆ. ಯಾರೋ ಒಬ್ಬರ ಮೇಲೆ ದ್ವೇಷ ಸಾಧಿಸಲು, ತಮ್ಮ ಕೆಲಸ ಮಾಡಿಸಿಕೊಳ್ಳಲು, ಅಥವ ಅವರ ಹೆಸರನ್ನೇ ಸಂಪೂರ್ಣವಾಗಿ ಹಾಳು ಮಾಡಲು ಹನಿಟ್ರ್ಯಾಪ್ ಅನ್ನೋ ಅಸ್ತ್ರ ಬಳಸಲಾಗುತ್ತಿದೆ. ರಾಜ್ಯದ ಮಾಜಿ ಸಿಎಂಗಳ ಹನಿಟ್ರ್ಯಾಪ್​ ವಿಡಿಯೋ ಕೂಡ ಸಿಡಿ ಸೇರಿತ್ತು ಅನ್ನೋ ಸುದ್ದಿಯೂ ಹರಿದಾಡುತ್ತಿದೆ. ಸಾಕಷ್ಟು ಜನ ಈಗಾಗಲೇ ತಮ್ಮ ವಿಡಿಯೋ ಎಲ್ಲಿ ಲೀಕ್ ಆಗುತ್ತೋ ಅನ್ನೋ ಭಯದಲ್ಲಿ ಈಗಾಗಲೇ ಕೋರ್ಟ್​​ಗೂ ಹೋಗಿ ವಿಡಿಯೋ ಪ್ರಸಾರ ಮಾಡದಂತೆ ಸ್ಟೇ ಅನ್ನೂ ತಂದುಬಿಟ್ಟಿದ್ದಾರೆ.

ಚುನಾವಣಾ ಸಮಯದಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್​ಡ್ರೈವ್ ಸಾಕಷ್ಟು ಸದ್ದು ಮಾಡಿತ್ತು. ಮತದಾನದ ಒಂದೆರಡು ದಿನದ ಹಿಂದೆ ಈ ಪೆನ್​ಡ್ರೈವ್ ವೈರಲ್ ಆಯ್ತು. ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ಆರೋಪವೂ ಕೇಳಿಬಂತು. ಇವೆಲ್ಲದರ ಪರಿಣಾಮ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸೋತುಹೋದರು. ಅತ್ಯಾಚಾರ ಆರೋಪದಲ್ಲಿ ಜೈಲು ಸೇರುವಂತಾಯ್ತು. ಸೂರಜ್ ರೇವಣ್ಣ ಕೂಡ ಸಲಿಂಗ ಕಾಮದ ಆರೋಪದಿಂಡ ಜೈಲು ಸೇರಿದ್ರು. ಮನೆ ಕೆಲಸದವಳಿಗೆ ಕಾಟ ಕೊಟ್ಟರು ಅಂತ ತಂದೆ ಹೆಚ್​​ಡಿ ರೇವಣ್ಣರನ್ನೂ ಪೊಲೀಸರು ಬಂಧಿಸಿಬಿಟ್ಟಿದ್ದರು. ಇವೆಲ್ಲವೂ ಆಗಿದ್ದು ಇದೇ ಹನಿಟ್ರ್ಯಾಪ್​​ನಿಂದ.. ಹನಿ ಜಾಲಕ್ಕೆ ಬಿದ್ದು ಇಡೀ ಹೆಚ್​ಡಿ ರೇವಣ್ಣರ ಫ್ಯಾಮಿಲಿಯ ಮರ್ಯಾದೆಯೇ ಹೊರಟುಹೋಯ್ತು. ರಾಜಕೀಯ ಭೀಷ್ಮನಂತಿದ್ದ ದೇವೇಗೌಡರು ತಲೆ ತಗ್ಗಿಸುವಂತಾಯ್ತು. ತಂದೆ ಮಕ್ಕಳ ಎಡವಟ್ಟಿನಿಂದ ಇಡೀ ಜೆಡಿಎಸ್ ಪಕ್ಷವೇ ಮುಜುಗರ ಅನುಭವಿಸಿ ಅಸ್ತಿತ್ವ ಕಳೆದುಕೊಳ್ಳುವಂತಾಯ್ತು.

ಹನಿಟ್ರ್ಯಾಪ್ ಮೂಲಕ ಭ್ರಷ್ಟಾಚಾರ ಬಯಲು!

ಅಧಿಕಾರಿಗಳು, ರಾಜಕಾರಣಿಗಳನ್ನ ಕೆಲ ಗ್ಯಾಂಗ್ ತಮ್ಮ ಕೆಲಸ ಮಾಡಿಸಿಕೊಳ್ಳಲು ಬಳಸುತ್ತಿದ್ದಾರೆ. ತಮಗೆ ಬೇಕಾದ ಫೈಲ್ ಮೂವ್ ಮಾಡಿಸಿಕೊಳ್ಳಲು, ಮಾನಿನಿಯರನ್ನ ಮುಂದೆ ಬಿಡಲಾಗುತ್ತಿದೆ. ಸ್ಟಾರ್ ಹೋಟೆಲ್​​​​ಗಳಲ್ಲಿ ರೂಂ ಬುಕ್ ಮಾಡುವ ಜನಪ್ರತಿನಿಧಿಗಳು ಅಲ್ಲಿ ಖ್ಯಾತ ನಟಿಯರನ್ನೋ, ಸೆಲೆಬ್ರಿಟಿಗಳನ್ನೂ ತಮ್ಮ ರೂಂಗೆ ಕರೆಸಿಕೊಳ್ಳುತ್ತಾರೆ. ಇದನ್ನೇ ಬಳಸಿಕೊಳ್ಳುವ ಕೆಲ ಗ್ಯಾಂಗ್, ಸೆಲೆಬ್ರಿಟಿಗಳನ್ನೋ, ಮಾಡೆಲ್​​​​ಗಳನ್ನೋ ಮುಂದೆ ಬಿಟ್ಟು ನಾಯಕರನ್ನ ತೃಪ್ತಿ ಪಡಿಸಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಯಾವುದಕ್ಕೂ ಇರಲಿ ಅಂತ ವಿಡಿಯೋ ಕೂಡ ಮಾಡಿಟ್ಟುಕೊಳ್ತಿದ್ದಾರೆ. ವಿಡಿಯೋದಲ್ಲಿ ಆ ಶಾಸಕ ಸಿಕ್ಕಬಿದ್ದನೋ ಅಲ್ಲಿಗೆ ಅವನ ಕಥೆ ಮುಗಿಯಿತು. ಮಂಚದ ಮೇಲೆ ಮೂವ್ ಆಗಿ, ಫೈಲ್ ಕೂಡ ಮೂವ್ ಮಾಡಿಟ್ಟ ಶಾಸಕನ ಬಣ್ಣ ಬಯಲು ಮಾಡ್ತೀವಿ ಎಂದು ಹೆದರಿಸಿ ಇನ್ನಷ್ಟು ಕೆಲಸಗಳನ್ನ ಕೂಡ ಮಾಡಿಸಿಕೊಳ್ಳಲಾಗುತ್ತಿದೆ. ಇವೆಲ್ಲವೂ ಈಗ ಓಪನ್ ಸೀಕ್ರೆಟ್.

ಪ್ರೊಡ್ಯೂಸರ್ ಯಾರು, ಡೈರೆಕ್ಟರ್ ಯಾರು?

ರಾಜ್ಯದಲ್ಲಿ ಈಗಾಗಲೇ 48 ಶಾಸಕರು, ಸಚಿವರ ಹನಿಟ್ರ್ಯಾಪ್ ಆಗಿದೆ ಅನ್ನೋ ಒಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಸ್ವತಃ ಸಚಿವ ಕೆ.ಎನ್.ರಾಜಣ್ಣ ಅವರೇ ಈ ವಿಚಾರವನ್ನ ಅಧಿವೇಶನದಲ್ಲೇ ಪ್ರಸ್ತಾಪಿಸಿದ್ದಾರೆ. ತನ್ನನ್ನೂ ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿಸಲು ಯತ್ನಿಸಿದ್ದಾರೆ. ಈ ಬಗ್ಗೆ ದಾಖಲೆಗಳಿವೆ ಅಂತ ಸದನದ ಮುಂದಿಟ್ಟಿದ್ದಾರೆ. ಪಕ್ಷ ಬೇಧ ಮರೆತು ಬಿಜೆಪಿ, ಜೆಡಿಎಸ್ ಶಾಸಕರು ಕೂಡ ಜನಪ್ರತಿನಿಧಿಗಳನ್ನ ಖೆಡ್ಡಾಕ್ಕೆ ತೋಡುತ್ತಿರುವ ಈ ಪ್ರಯತ್ನವನ್ನ ಖಂಡಿಸುವ ಪ್ರಯತ್ನ ಏನೋ ಮಾಡಿದ್ದಾರೆ ನಿಜ.. ಹಾಗಾದರೆ ಇಷ್ಟೆಲ್ಲಾ ಮಾಡಿಸುತ್ತಿರುವ ಆ ವ್ಯಕ್ತಿಗಳು ಯಾರು? ಯಾತಕ್ಕಾಗಿ ಈ ರೀತಿಯ ಹನಿಟ್ರ್ಯಾಪ್ ಮಾಡಿಸುತ್ತಿದ್ದಾರೆ..?

ಕಾಂಗ್ರೆಸ್​​​ನಲ್ಲಿ ಈಗಾಗಲೇ ಮುಂದಿನ ಮುಖ್ಯಮಂತ್ರಿ ಫೈಟ್ ಜೋರಾಗಿ ನಡೆಯುತ್ತಿದೆ. ಸಂಪುಟ ಪುನಾರಚನೆ ಆದರೆ ಇನ್ನಷ್ಟು ಜನ ಸಚಿವ ಸ್ಥಾನ ಪಡೆಯೋ ಆಕಾಂಕ್ಷಿಗಳೂ ಆಗಿದ್ದಾರೆ. ಈ ಹೊತ್ತಿನಲ್ಲೇ ಹನಿಟ್ರ್ಯಾಪ್ ಮಾಡಿ ಬೇಡದವರನ್ನ ಕುರ್ಚಿಯಿಂದ ಬೀಳಿಸುವ, ಬೇಕಾದವರನ್ನ ಅಧಿಕಾರಕ್ಕೇರಿಸೋ ಎಲ್ಲ ಪ್ರಯತ್ನಗಳೂ ಜೋರಾಗಿ ನಡೆಯುತ್ತಿದೆ. ಕೆಲವೊಂದಿಷ್ಟು ಅಕ್ರಮಗಳ ಹಿಂದೆ 4-5 ಪ್ರಭಾವಿ ಸಚಿವರ ಹೆಸರು ಈಗಾಗಲೇ ಕೇಳಿಬಂದಿದೆ. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಹಿಂದೆ ಸಚಿವರ ಪಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಆಕಾಂಕ್ಷಿ ಆಗಿದ್ದ ಪ್ರಭಾವಿ ಸಚಿವರನ್ನೂ ಈ ಆರೋಪದ ಆಧಾರದ ಮೇಲೆ ಕುರ್ಚಿಯಿಂದ ದೂರವಿಡುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಅದೇ ರೀತಿ ತಮ್ಮ ರಾಜಕೀಯ ಎದುರಾಳಿಗಳನ್ನೂ ಮುಗಿಸೋಕೆ ಪ್ರಭಾವಿ ಸಚಿವರೊಬ್ಬರು ಇಷ್ಟೆಲ್ಲಾ ಯತ್ನ ಮಾಡುತ್ತಿದ್ದಾರೆ ಅನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಪೆನ್​​ಡ್ರೈವ್ ಶೂರನಿಗೂ ಸಂಕಷ್ಟ ತಪ್ಪಿದ್ದಲ್ಲ..!

ಈಗ ರಾಜ್ಯದ ಪ್ರಭಾವಿ ನಾಯಕರೊಬ್ಬರು ಎಲ್ಲರನ್ನೂ ತಮ್ಮ ಕಂಟ್ರೋಲ್​​​ನಲ್ಲಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆಂಬ ಕೂಗಿದೆ. ತಮ್ಮ ವಿರೋಧಿಗಳ ಸದೆಬಡಿಯಲು ಹನಿಟ್ರ್ಯಾಪ್ ಬಳಸುತ್ತಿದ್ದಾರೆ. ಖಾಸಗಿ ಬದುಕಿನ ಕ್ಷಣಗಳನ್ನ ಸೆರೆ ಹಿಡಿದು, ಬಳಿಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವಿದೆ. ಮುಂದೆ ತಾವೇ ಮುಖ್ಯಮಂತ್ರಿ ಆದರೆ ಎಲ್ಲರೂ ನನ್ನ ಅಣತಿಯಂತೆ ನಡೆಯಬೇಕೆಂದು ಇಷ್ಟೆಲ್ಲಾ ಮಾಡಿಸ್ತಿದ್ದಾರೆ ಅನ್ನೋ ಮಾತಿದೆ. ಆದರೆ ಎಚ್ಚರ ಇರಲಿ. ಅದೇ ಪಕ್ಷದ ಹೈಕಮಾಂಡ್ ಕೂಡ ಇವೆಲ್ಲವನ್ನೂ ಗಮನಿಸುತ್ತಿದೆ. ತಾನು ಬೆಳೆಯಲು ಬೇರೆಯವರನ್ನ ಯಾಮಾರಿಸುತ್ತಿರೋದು ಹೈಕಮಾಂಡ್​​ಗೆ ಗೊತ್ತಿಲ್ಲವೆಂದೇನೂ ಅಲ್ಲ. ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಟ್ಟು, ಕಡೆಗೂ ತಾನೂ ಬೂದಿಯಾದಂತಾ ಪರಿಸ್ಥಿತಿ ಆ ಮಹಾನಾಯಕರಿಗೂ ಬಂದರೂ ಬರಬಹುದು. ಬೇರೆಯವರನ್ನ ಖೆಡ್ಡಾಕೆ ಕೆಡವಿ ಬೇಟೆಯಾಡುತ್ತಿರುವ ಆ ನಾಯಕರನ್ನೂ ಇನ್ಯಾರೋ ರಣಬೇಟೆಗಾರ ಬೇಟೆ ಆಡಿಬಿಡಬಹುದು.

ಇನ್ನೊಂದು ಕಡೆ ಮುಖ್ಯಮಂತ್ರಿಸ್ಥಾನದ ಮೇಲೆ ಆಸೆ ಹೊಂದಿರೋ ಆ ನಾಯಕನ ವಿರುದ್ಧ ಉಳಿದವರೇ ಆರೋಪಿಸಿ ಬೊಟ್ಟು ತೋರುತ್ತಿರಬಹುದು ಎನ್ನುವ ವಾದವೂ ಇದೆ. ಹನಿಟ್ರ್ಯಾಪ್ ಜಾಲದಲ್ಲಿ ಬೀಳಿಸುತ್ತಿರುವ ಆ ನಾಯಕನಿಗೆ ಮುಖ್ಯಮಂತ್ರಿ ಪಟ್ಟ ಕೊಡಿಸಬಾರದೆಂದೂ ಆರೋಪಿಸ್ಥಾನದಲ್ಲಿ ಕೂರಿಸುವ ಯತ್ನವೂ ನಡೆದಿರಬಹುದು. ಸರ್ಕಾರ ಈ ಎಲ್ಲದರ ಬಗ್ಗೆ ತನಿಖೆ ನಡೆಸಿ ಹನಿಟ್ರ್ಯಾಪ್ ದಂಧೆಗೆ ಮುಕ್ತಿ ಹಾಡಬೇಕಿದೆ.

– ಜಯಕೀರ್ತಿ ಭಾರದ್ವಾಜ್,  ಔಟ್‌ಪುಟ್ ಎಡಿಟರ್, ಫ್ರೀಡಂ ಟಿವಿ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments