ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿನಲ್ಲಿರೋದು ಎನ್ನಲಾದ ಫೋಟೋವೊಂದು ವೈರಲ್ ಆಗಿದೆ.
ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪ ದರ್ಶನ್ ಮೇಲಿದೆ. ಹಾಗಾಗಿ ಅವರನ್ನು ಪರಪ್ಪನ ಅಗ್ರಹಾರದ ಸ್ಪೆಷಲ್ ಬ್ಯಾರಕ್ನಲ್ಲಿ ಇರಿಸಲಾಗಿದೆ. ಅಲ್ಲಿ ಅವರು ಆರಾಮಾಗಿ ದಿನ ಕಳೆಯುತ್ತಿರುವಂತಿದೆ. ದರ್ಶನ್ ಅವರು ಸ್ಪೆಷಲ್ ಬ್ಯಾರಕ್ನಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ ಮಗ್ ಹಿಡಿದುಕೊಂಡು ಅವರು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟ್ ಕೂಡ ಇದೆ. ಈ ಫೋಟೋ ವೈರಲ್ ಆಗಿದೆ. ಇನ್ನೂ ಯಾವೆಲ್ಲ ಸೌಕರ್ಯಗಳನ್ನು ನಟನಿಗೆ ನೀಡಿರಹುದು ಎಂಬ ಪ್ರಶ್ನೆಯನ್ನು ಈ ಫೋಟೋ ಹುಟ್ಟುಹಾಕಿದೆ. ಜೈಲು ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ಮೂಡುವಂತಾಗಿದೆ.
ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌ರನ್ನ ವಿಐಪಿ ಸೆಕ್ಯುರಿಟಿ ಸೆಲ್-1ನಲ್ಲಿ ಹಾಗೂ ರೌಡಿ ಶೀಟರ್ ವಿಲ್ಸನ್‌ಗಾರ್ಡನ್ ನಾಗನನ್ನ ಬ್ಯಾರಕ್ 3 ರಲ್ಲಿ ಇರಿಸಲಾಗಿದೆ. ಹೀಗಿದ್ದರೂ ಜೈಲಲ್ಲಿ ದರ್ಶನ್-ನಾಗನ ಭೇಟಿಯಾಗಿದೆ. ಇಬ್ಬರೂ ಜೈಲಲ್ಲಿ ಕೂತು ಕಾಲಹರಣ ಮಾಡಿದ್ದಾರೆ ಎನ್ನಲಾಗಿದೆ.