ಕೊಪ್ಪಳ: ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎರಡನೇ ವಿಭಾಗದ ಸಹಾಯಕ (SDA) ರುದ್ರೇಶ್ ಯಾದವಣ್ಣನವರ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಇದೀಗ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಜೆಸ್ಕಾಂ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜೆಸ್ಕಾಂ ಕಚೇರಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದ 42 ವರ್ಷದ ಜಯರಾಂ ಪತ್ತಾರ ಆತ್ಮಹತ್ಯೆಗೆ ಯತ್ನಿಸಿದ ನೌಕರ. ಜೆಸ್ಕಾಂ ಎಇಇ ಸಂತೋಷ್ ಎಂಬುವರು ಗುತ್ತಿಗೆದಾರ ನೌಕರ ಜಯರಾಂ ಪತ್ತಾರ ಅವರಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಡೆತ್ ನೋಟ್ ಬರೆದಿಟ್ಟು ಜಯರಾಂ ಪತ್ತಾರ ಅವರು ಇಂದು ಬೆಳಗ್ಗಿನ ಜಾವ ಗಿಣಿಗೇರಿ ಗ್ರಾಮದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬಸ್ಥರು ಕೂಡಲೇ ಜಯರಾಂ ಪತ್ತಾರ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಬಸ್ಸಾಪುರ ಗ್ರಾಮದ ರೆಸಾರ್ಟ್ನಲ್ಲಿ ಕಾಮಗಾರಿ ಮಾಡಿದ ದಾಖಲಾತಿ ಕಳೆದುಹೋಗಿವೆ ಎಂದು ಜೆಸ್ಕಾಂ ಎಇಇ ಸಂತೋಷ್ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಜೆಸ್ಕಾಂ ಗುತ್ತಿಗೆದಾರ ಜಯರಾಂ ಪತ್ರದಲ್ಲಿ ತಿಳಿಸಿದ್ದಾರೆ. ಇನ್ನು, ಆತ್ಮಹತ್ಯೆಗೆ ಯತ್ನಿಸಿರುವ ಜಯರಾಂ ಪತ್ತಾರ ಅವರು ಕಳೆದ 25 ವರ್ಷಗಳಿಂದ ಜೆಸ್ಕಾಂ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.