ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಲೆಕ್ಕವಿಲ್ಲದಷ್ಟು ಬೀದಿ ನಾಯಿಗಳಿವೆ. ಹೆಜ್ಜೆ ಹೆಜ್ಜೆಗೂ ಬೀದಿ ನಾಯಿಗಳು ಸಿಗುತ್ತವೆ. ಬೀದಿ ನಾಯಿ ಕಾಟದಿಂದ ಬೇಸತ್ತಿರುವ ನಗರವಾಸಿಗಳು ಇವು ತೊಲಗಿದರೆ ಸಾಕಪ್ಪಾ ಎಂದು ಹಿಡಿಶಾಪ ಹಾಕುತ್ತಾರೆ. ಆದರೆ, ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಲ್ಲಿ ಶ್ವಾನ ಪ್ರಿಯರೊಬ್ಬರು ನಿಗೂಢವಾಗಿ ಕಾಣೆಯಾಗಿರುವ ಬೀದಿ ನಾಯಿಗಳಿಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ .
ಹೆಚ್.ಆರ್.ಬಿ.ಆರ್ ಲೇಔಟ್ನ ಎರಡನೇ ಬ್ಲಾಕ್ನಲ್ಲಿದ್ದ 7 ತಿಂಗಳ ನಾಯಿಗೆ ದೂರುದಾರೆ ಪುನೀತಾ ರಂಗಸ್ವಾಮಿ ಅವರು ನಿತ್ಯ ಊಟ ಹಾಕುತ್ತಿದ್ದರು. ಹೀಗಾಗಿ, ನಿಯತ್ತಿನ ನಾಯಿ ಪುನೀತಾ ಅವರ ಮನೆ ಮುಂದೆ ಕಾವುಲಾಗಿ ಇರುತ್ತಿತ್ತು. 2025ರ ಡಿಸೆಂಬರ್ 14ರಂದು ನಾಯಿ ಬಿಸ್ಕೆಟ್ ಹಾಗೂ ನೀರು ಕುಡಿದು ಮನೆಯ ಮುಂದೆ ಮಲಗಿತ್ತು. ಆದರೆ, ಡಿಸೆಂಬರ್ 15ರ ಬೆಳಿಗ್ಗೆಯಿಂದ ನಾಯಿ ಕಾಣೆಯಾಗಿದೆ.
ನಾಯಿ ಎಲ್ಲಿ ಹೋಯ್ತು ಅಂತ ತಿಳಿಯಲು ಅನಿಲ್ ಅವರ ಬಳಿ ಪುನೀತಾ ಅವರು ಡಿಸೆಂಬರ್ 14ರ ರಾತ್ರಿ 11 ಗಂಟೆಯಿಂದ 15ರ ಮಧ್ಯಾಹ್ನ 12 ಗಂಟೆವರೆಗಿನ ಸಿಸಿಟಿವಿ ದೃಶ್ಯಾವಳಿ ಕೇಳಿದ್ದಾರೆ. ಆದರೆ, ಅನಿಲ್ ಸಿಸಿಟಿವಿ ದೃಶ್ಯ ನೀಡಲು ನಿರಾಕರಿಸಿದ್ದಾರೆ. ಹೀಗಾಗಿ, ಅನಿಲ್ ಮೇಲೆ ಅನುಮಾನವಿದೆ. ಅವರೇ ನಾಯಿಗೆ ಹಿಂಸಿಸಿ ಬೇರೆ ಕಡೆ ಬಿಟ್ಟು ಬಂದಿದ್ದಾರೆಂದು ದೂರಿನಲ್ಲಿ ದಾಖಲಿಸಿದ್ದಾರೆ.