ಮೈಸೂರು: ಪ್ರಸಿದ್ಧ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಗದ್ದಿಗೆ ಬಳಿ ಮಲಗಿದ್ದ ಭಕ್ತರ ಮೇಲೆ ಅಪರಿಚಿತ ಕಾರು ಹರಿದು ಓರ್ವ ಭಕ್ತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟ ವ್ಯಕ್ತಿಯನ್ನು ಸುತ್ತೂರು ಸಮೀಪದ ಗಟ್ಟವಾಡಿ ಗ್ರಾಮದ ಜಿ.ಎಂ. ಪ್ರದೀಪ್ ಕುಮಾರ್ (36) ಎಂದು ಗುರುತಿಸಲಾಗಿದೆ. ಇವರೊಂದಿಗೆ ಮಲಗಿದ್ದ ಮತ್ತೊಬ್ಬ ವ್ಯಕ್ತಿಗೂ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಸುತ್ತೂರು ದೇವಾಲಯದ ಆವರಣದಲ್ಲಿ ನಡೆದ ಪೌರಾಣಿಕ ನಾಟಕವನ್ನು ವೀಕ್ಷಿಸಿ ಬಳಿಕ ಗದ್ದಿಗೆಯ ಸಮೀಪವೇ ನಿದ್ರೆಗೆ ಜಾರಿದ್ದರು. ಗಾಢ ನಿದ್ರೆಯಲ್ಲಿದ್ದ ಇಬ್ಬರ ತಲೆಯ ಭಾಗದ ಮೇಲೆಯೇ ಅಪರಿಚಿತ ಕಾರು ಹರಿದು ಹೋಗಿದೆ. ಘಟನೆಯ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ.
ಘಟನೆಯಿಂದ ರೊಚ್ಚಿಗೆದ್ದ ಗಟ್ಟವಾಡಿ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬಿಳಿಗೆರೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಚಾಲಕನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಬಿಳಿಗೆರೆ ಪೊಲೀಸರು ‘ಹಿಟ್ ಅಂಡ್ ರನ್’ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


