ಜೈಪುರ : 10 ದಿನಗಳ ಹಿಂದೆ ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಮೂರು ವರ್ಷದ ಬಾಲಕಿಯನ್ನು ಬುಧವಾರ ರಕ್ಷಿಸಲಾಯಿತು ಆದರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಹೊರತರಲಾಯಿತು. ದುರಂತವೆಂದರೆ ಆಕೆ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಮೂವರು ವೈದ್ಯರ ತಂಡವು ಬಾಲಕಿಯನ್ನು ಪರೀಕ್ಷಿಸಿದೆ. ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಆಕೆಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ” ಎಂದು ಪ್ರಧಾನ ವೈದ್ಯಾಧಿಕಾರಿ ಚೈತನ್ಯ ರಾವತ್ ತಿಳಿಸಿದ್ದಾರೆ.
ರಾಜಸ್ಥಾನ ರಾಜ್ಯದಲ್ಲಿಯೇ ಸುದೀರ್ಘವಾದ ರಕ್ಷಣಾ ಕಾರ್ಯಾಚರಣೆಗಳಲ್ಲಿ ಇದು ಕೂಡ ಒಂದು. ಈ ಕಾರ್ಯಾಚರಣೆ 160 ಗಂಟೆಗಳ ಕಾಲ ನಡೆಯಿತು. ಆ ಮಗುವಿನ ಕುಟುಂಬಸ್ಥರು ತಮ್ಮ ಮಗುವನ್ನು ಜೀವಸಹಿತ ಉಳಿಸಿಕೊಡಿ ಎಂದು ಜಿಲ್ಲಾಡಳಿತ, ಪೊಲೀಸರ ಎದುರು ಗೋಗರೆದಿದ್ದರು. ಜಿಲ್ಲಾಡಳಿತ ಕಾರ್ಯಾಚರಣೆಯಲ್ಲಿ ನಿರ್ಲಕ್ಷ್ಯ ಮಾಡಿದೆ ಎಂದು ಅವರು ಹತಾಷೆಯಿಂದ ಆರೋಪಿಸಿದ್ದರು. ಮತ್ತೊಂದೆಡೆ ಆಡಳಿತವು ಇದು ಕಠಿಣ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಹೇಳಿಕೊಂಡಿತ್ತು.