ಬೆಂಗಳೂರು : ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎನ್ನಲಾದ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸ್ವತಃ ಮುಖ್ಯಮಂತ್ರಿ ಕಚೇರಿ ಈ ವಿಚಾರವಾಗಿ ಮಧ್ಯೆ ಪ್ರವೇಶ ಮಾಡಿದೆ. ವಿಧಾನಸೌಧ ಡಿಸಿಪಿ ಎಂ.ಎನ್. ಕರಿಬಸವನಗೌಡಗೆ ಮುಖ್ಯಮಂತ್ರಿ ಕಚೇರಿ ವಾರ್ನಿಂಗ್ ಮಾಡಿ, ನೋಟಿಸ್ ಜಾರಿ ಮಾಡಿದೆ. ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ಜಾರಿ ಮಾಡಲಾಗಿದೆ.
ರಾಜ್ಯಸಭೆ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ವಿಧಾನಸೌಧಗೆ ಅಷ್ಟೊಂದು ಜನ ಬಂದಿದ್ದು ಯಾಕೆ..? ಗುರುತು-ಪರಿಚಯ ಇಲ್ಲದವರನ್ನ ವಿಧಾನಸೌಧದ ಒಳಗೆ ಬಿಟ್ಟುದ್ದು ಯಾಕೆ.? ಅಷ್ಟೊಂದು ಜನರಿಗೆ ವಿಧಾನಸೌಧದ ಒಳಗೆ ಅವಕಾಶ ಕೊಟ್ಟಿದ್ದೇಕೆ ಅಂತ ಡಿಸಿಪಿ ಎಂ.ಎನ್. ಕರಿಬಸವನಗೌಡಗೆ ಛೀಮಾರಿ ಹಾಕಲಾಗಿದೆ. ಐಡಿಕಾರ್ಡ್ ಇಲ್ಲದೇ, ಪಾಸ್ ಇಲ್ಲದೇ ಅಷ್ಟೊಂದು ಜನರಿಗೆ ವಿಧಾನಸೌಧಗೆ ಅನುಮತಿ ಕೊಟ್ಟಿದ್ದರು ಎನ್ನಲಾಗಿದೆ.
ವಿಧಾನಸೌಧ ಭದ್ರತೆಯ ಸಂಪೂರ್ಣ ಹೊಣೆ ಡಿಸಿಪಿ ಕರಿಬಸವನಗೌಡ ಮೇಲಿರುತ್ತೆ. ಆದ್ರೆ, ಇಲ್ಲಿ ಭದ್ರತಾ ಲೋಪವೂ ಆಗಿದೆ. ಹೀಗಾಗಿ ಸರ್ಕಾರಕ್ಕೆ ಮುಜುಗರ ಆಗಿದ್ದು, ಡಿಸಿಪಿ ಕರಿಬಸವನಗೌಡ ತಲೆದಂಡ ಆಗುವ ಸಾಧ್ಯತೆ ಇದೆ. ವಿಧಾನಸೌಧದಲ್ಲಿ ಘೋಷಣೆ ಕೂಗಿದ ಪ್ರಕರಣದಿಂದ ಸರ್ಕಾರ ಮುಜುಗರ ಎದುರಿಸ್ತು. ರಾಜ್ಯಸಭೆಗೆ ನಾಸಿರ್ ಹುಸೇನ್ ಆಯ್ಕೆಯಾದ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿತ್ತು.


