ಹುಬ್ಬಳ್ಳಿ; ಒಂದು ಕಾಲದಲ್ಲಿ ಕಲ್ಲಿದ್ದಲು ಹಗರಣಗಳದ್ದೇ ಸದ್ದಿರುತ್ತಿತ್ತು. ಆದರೀಗ ಕಲ್ಲಿದ್ದಲು ವಲಯ ಹಗರಣ, ಭ್ರಷ್ಟಾಚಾರದಿಂದ ಸಂಪೂರ್ಣ ಮುಕ್ತಿ ಪಡೆದಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹತ್ತು ವರ್ಷದ ಹಿಂದೆ ಕಲ್ಲಿದ್ದಲು ಎಂದರೆ ಹಗರಣಗಳದ್ದೇ ಚಿತ್ರಣ ಕಣ್ಣೆದುರು ಬರುತ್ತಿತ್ತು. ಆಗ ಭ್ರಷ್ಟಾಚಾರ ಮಿತಿ ಮೀರಿತ್ತು. ಆದರೆ, ನರೇಂದ್ರ ಮೋದಿ ಅವರ ಆಡಳಿತದಲ್ಲಿ ಆ ಕಪ್ಪು ಮಸಿ ಅಳಿಸಿ ಹೋಗಿದೆ ಎಂದು ಪ್ರತಿಪಾದಿಸಿದರು. ಖಾತೆ ನೀಡುವಾಗ ಪ್ರಧಾನಿ ಮೋದಿ ಅವರು ‘ಮುಖಕ್ಕೆ ಮಸಿ ಬಳಿದುಕೊಳ್ಳಬೇಡ’ ಎಂದಿದ್ದರು. ಅವರ ಆಶಯದಂತೆ ಕಲ್ಲಿದ್ದಲು, ಗಣಿ ಖಾತೆಯಲ್ಲಿ ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಜೋಶಿ ಸಮರ್ಥಿಸಿಕೊಂಡರು.
ಕಲ್ಲಿದ್ದಲಿನಂತಹ ಪ್ರಮುಖ ಖಾತೆ ಹೊಂದಿದ್ದರು ನನ್ನ ಕೈ ಕಪ್ಪು ಮಾಡಿಕೊಂಡಿಲ್ಲ. 20 ವರ್ಷದಲ್ಲಿ ಸಂಸದ, ಸಚಿವನಾಗಿ ಯಾವತ್ತೂ ತಲೆ ತಗ್ಗಿಸುವ ಕೆಲಸ ಮಾಡಿಲ್ಲ ಎಂದರು. ಕಲ್ಲಿದ್ದಲಿನಲ್ಲಿ ಭಾರತ ಆತ್ಮ ನಿರ್ಭರ: ಕಲ್ಲಿದ್ದಲು ಉತ್ಪಾದನೆಯಲ್ಲಿ ಭಾರತ ಆತ್ಮ ನಿರ್ಭರ ಆಗಲಿದೆ. ದೇಶದಲ್ಲಿ ಈಗ 325 ವರ್ಷಗಳಿಗೆ ಆಗುವಷ್ಟು ಕಲ್ಲಿದ್ದಲು ಗಣಿ ಇದೆ. ಬರುವ ವರ್ಷಗಳಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದಿಲ್ಲ. ಅಂಥ ಒಂದು ಸುಸ್ಥಿತಿಗೆ ಹೆಜ್ಜೆ ಇಡುತ್ತಿದ್ದೇವೆ ಎಂದು ಹೇಳಿದರು.
ಮೋದಿ ಸರ್ಕಾರ ಬರುವ ಮೊದಲು ಗಣಿಯಿಂದ ಒರಿಸ್ಸಾ ಆದಾಯ 5000 ಕೋಟಿ ಇತ್ತು. ಅದೀಗ ಕೇಂದ್ರ ಸರ್ಕಾರದ ಪಾಲಿಸಿಗಳಿಂದಾಗಿ 5000 ಕೋಟಿ ರು. ಆಗಿದೆ. ಹೀಗೆ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ ರಾಜ್ಯ ಸರ್ಕಾರಗಳ ಬೊಕ್ಕಸಕ್ಕೂ ಶಕ್ತಿ ತುಂಬುತ್ತಿದೆ ಎಂದು ಸಚಿವ ಜೋಶಿ ತಿಳಿಸಿದರು. 1984ರ ನಂತರ ಯಾರೂ ಸಂಸದೀಯ ವ್ಯವಹಾರಗಳ ಖಾತೆ 5 ವರ್ಷ ಪೂರೈಸಿರಲಿಲ್ಲ. ತಾವದನ್ನು ಪೂರೈಸಿದ್ದಾಗಿ ಸಚಿವ ಜೋಶಿ ಸಂತಸ ಹಂಚಿಕೊಂಡರು.