ದೇವನಹಳ್ಳಿ: ಅಯೋಧ್ಯೆಯ ರಾಮ ಮಂದಿರದ ರಾಮ ಲಲ್ಲಾ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ಅವರು ಇಂದು ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಹೂವಿನ ಸುರಿಮಳೆ ಸುರಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗಿದೆ. ರಾಮ ಲಲ್ಲಾ ಮೂರ್ತಿಯ ಕೆತ್ತನೆ ಕೆಲಸಕ್ಕೆ ಕಳೆದ 7 ತಿಂಗಳಿಂದ ಅಯೋಧ್ಯೆಯಲ್ಲಿ ಅರುಣ್ ಯೋಗಿರಾಜ್ ತಂಗಿದ್ದರು. ರಾಮ ಲಲ್ಲಾನ ವಿಗ್ರಹಗಳನ್ನು ಮೂವರು ಶಿಲ್ಪಿಗಳು ಬೇರೆ-ಬೇರೆ ಮೂರ್ತಿಗಳ ಕೆತ್ತನೆ ಮಾಡಿದ್ದರು. ಶ್ರೀರಾಮ ಮಂದಿರದ ಸಮಿತಿಯವರು ಅಂತಿಮವಾಗಿ ಅರುಣ್ ಅವರ ಕೆತ್ತನೆಯ ಬಾಲ ರಾಮ ಮೂರ್ತಿಯನ್ನು ಆಯ್ಕೆ ಮಾಡಿ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ಇದರಿಂದ ಅರುಣ್ ಯೋಗಿರಾಜ್ ಇಡೀ ದೇಶದ ಗಮನ ಸೆಳೆದಿದ್ದಾರೆ.
ಅಯೋಧ್ಯೆಯಿಂದ ಅವರು ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರು ಬರುವ ವಿಷಯ ತಿಳಿದು ಸ್ವಾಗತಕ್ಕಾಗಿ ಕಾರ್ಯಕರ್ತರು ಮತ್ತು ಕುಟುಂಬಸ್ಥರು ಕಾದಿದ್ದರು. ಬಂದಿಳಿಯುತ್ತಿದ್ದಂತೆ ಕುಟುಂಬಸ್ಥರು ವಿಮಾನ ನಿಲ್ದಾಣದಲ್ಲಿ ಆರತಿ ಬೆಳಗಿ ಬರಮಾಡಿಕೊಂಡರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿರಿಯರ ಆರ್ಶೀವಾದದಿಂದ ರಾಮ ಮಂದಿರದ ರಾಮ ಲಲ್ಲಾ ಮೂರ್ತಿಯ ಕೆತ್ತನೆಯ ಅವಕಾಶ ಸಿಕ್ಕಿತು. ಜನರು ತೋರಿಸುತ್ತಿರುವ ಪ್ರೀತಿ ನೋಡಿದಾಗ ಭಾರತದಲ್ಲಿ ರಾಮನ ಬಗ್ಗೆ ಇರುವ ಪ್ರೀತಿ ತೋರಿಸುತ್ತದೆ. ನಿಮ್ಮ ಪ್ರೀತಿಗೆ ನಾನು ಚಿರಋಣಿ. ನಿಮ್ಮ ಪ್ರೀತಿ ಕಂಡು ಮೂರ್ತಿಯ ಕೆತ್ತನೆ ಮಾಡಿದ್ದು ಸಾರ್ಥಕ ಅನಿಸಿದೆ. ಕಲೆಗೆ ಗೌರವ ಸಿಕ್ಕಾತಾಂಗಿದೆ ಎಂದು ತಿಳಿಸಿದರು..