ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದು ಮಹತ್ವದ ಮತ್ತು ಐತಿಹಾಸಿಕ ಬದಲಾವಣೆ ಸಂಭವಿಸಿದೆ. ವಿಮಾನ ಅಪಘಾತದಲ್ಲಿ ಅಕಾಲಿಕವಾಗಿ ಮರಣ ಹೊಂದಿದ ಅಜಿತ್ ಪವಾರ್ ಅವರ ಉತ್ತರಾಧಿಕಾರಿಯಾಗಿ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಮೊದಲ ಮಹಿಳಾ ಡಿಸಿಎಂಆಗಿ ಸುನೇತ್ರಾ ಪವಾರ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ . ಇತ್ತೀಚೆಗೆ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮೃತಪಟ್ಟ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸ್ಥಾನಕ್ಕೆ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಕ ಮಾಡಲಾಗಿದೆ. ಇಂದು ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸರಳ ಹಾಗೂ ಗಂಭೀರ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಸುನೇತ್ರಾ ಪವಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಮೂಲಕ ಮಹಾರಾಷ್ಟ್ರದ ಇತಿಹಾಸದಲ್ಲೇ ಉಪಮುಖ್ಯಮಂತ್ರಿ ಪಟ್ಟ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸುನೇತ್ರಾ ಪಾತ್ರರಾಗಿದ್ದಾರೆ.
ಅಧಿಕಾರ ಸ್ವೀಕರಿಸುವ ಮುನ್ನ ಸುನೇತ್ರಾ ಪವಾರ್ ಅವರನ್ನು ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಸುನೇತ್ರಾ ಪವಾರ್, ನಂತರ ಜೂನ್ 18, 2024 ರಂದು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದೀಗ ಪತಿಯ ಅಕಾಲಿಕ ನಿಧನದಿಂದ ಸೃಷ್ಟಿಯಾದ ರಾಜಕೀಯ ಶೂನ್ಯತೆಯನ್ನು ತುಂಬಲು ಅವರು ಸಜ್ಜಾಗಿದ್ದಾರೆ. ಪತಿ ಅಜಿತ್ ಪವಾರ್ ಅವರು ನಿಭಾಯಿಸುತ್ತಿದ್ದ ಹಣಕಾಸು, ಅಬಕಾರಿ ಹಾಗೂ ಕ್ರೀಡಾ ಇಲಾಖೆಯಂತಹ ಪ್ರಮುಖ ಜವಾಬ್ದಾರಿಗಳನ್ನು ಸುನೇತ್ರಾ ಅವರೇ ಮುನ್ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.
ಕಳೆದ ಜನವರಿ 28ರಂದು ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತವು ಇಡೀ ದೇಶವನ್ನೇ ನಡುಗಿಸಿತ್ತು. ಲಿಯರ್‌ಜೆಟ್ 45 ವಿಮಾನವು ಟೇಬಲ್‌ಟಾಪ್ ಏರ್‌ಸ್ಟ್ರಿಪ್‌ನಿಂದ ಕೇವಲ 200 ಮೀಟರ್ ದೂರದಲ್ಲಿ ಪತನಗೊಂಡಾಗ, ಅಜಿತ್ ಪವಾರ್ (66) ಅವರೊಂದಿಗೆ ಅವರ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ ಹಾಗೂ ಪೈಲಟ್‌ಗಳಾದ ಸುಮಿತ್ ಕಪೂರ್ ಮತ್ತು ಶಾಂಭವಿ ಪಾಠಕ್ ದುರ್ಮರಣಕ್ಕೀಡಾಗಿದ್ದರು. ಈ ಆಘಾತದ ನಡುವೆಯೂ ರಾಜ್ಯದ ಆಡಳಿತ ಯಂತ್ರ ಕುಸಿಯದಂತೆ ತಡೆಯಲು ಪವಾರ್ ಕುಟುಂಬ ಮತ್ತು ಎನ್‌ಸಿಪಿ ಈ ನಿರ್ಧಾರಕ್ಕೆ ಬಂದಿದೆ.
ಸುನೇತ್ರಾ ಪವಾರ್ ಅವರು ಪತಿಯ ಹಾದಿಯಲ್ಲೇ ಸಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಿದ್ದಾರೆ. ಹಣಕಾಸಿನಂತಹ ನಿರ್ಣಾಯಕ ಖಾತೆಗಳನ್ನು ಮಹಿಳೆಯೊಬ್ಬರು ವಹಿಸಿಕೊಂಡಿರುವುದು ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ. ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಪ್ರಮುಖ ಸಚಿವರು ಭಾಗವಹಿಸಿ ಹೊಸ ಉಪಮುಖ್ಯಮಂತ್ರಿಗೆ ಶುಭಾಶಯ ಕೋರಿದರು


