ನಿನ್ನೆವರೆಗೂ ಯಾರ ಮುಖದಲ್ಲಿ ನಗು ಇತ್ತೋ, ಯಾರು ಬೆಳ್ಳಿಯನ್ನು ನಂಬಿ ಲಕ್ಷ ಲಕ್ಷ ಸುರಿದಿದ್ದರೋ, ಅವರ ಬದುಕು ಇಂದು ಅಕ್ಷರಶಃ ಬೀದಿಗೆ ಬಿದ್ದಿದೆ! ಹೌದು, ‘ಬಡವರ ಬಂಗಾರ’ ಅಂತಲೇ ಕರೆಯಿಸಿಕೊಳ್ಳುವ ಬೆಳ್ಳಿ, ಇಂದು ಹೂಡಿಕೆದಾರರ ಪಾಲಿಗೆ ವಿಷವಾಗಿ ಪರಿಣಮಿಸಿದೆ. FD ಹಣ ಬಿಡಿಸಿ, ಹೆಂಡತಿಯ ಒಡವೆ ಅಡವಿಟ್ಟು, ನಾಳೆ ಬೆಳ್ಳಿ ಬೆಲೆ ಹೆಚ್ಚಾಗುತ್ತೆ ಅಂತ ನಂಬಿದ್ದವರಿಗೆ ಇವತ್ತು ಸಿಕ್ಕಿದ್ದು ಮಾತ್ರ ಮರ್ಮಾಘಾತ! ಬೆಳ್ಳಿಯ ಬೇಟೆಗೆ ಬ್ರೇಕ್ ಬಿದ್ದಿದೆ. ಒಂದೇ ದಿನದಲ್ಲಿ ಲಕ್ಷ ಲಕ್ಷ ರೂಪಾಯಿ ಮಣ್ಣು ಪಾಲಾಗಿದೆ! ಅಸಲಿಗೆ ಮಾರುಕಟ್ಟೆಯಲ್ಲಿ ನಡೆದಿದ್ದೇನು? ಈ ಕುಸಿತಕ್ಕೆ ಕಾರಣ ಯಾರು? ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…”
“ಕಳೆದ ವಾರವಷ್ಟೇ ಬೆಳ್ಳಿ ಬೆಲೆ ಕೆಜಿಗೆ 3.8 ಲಕ್ಷ ರೂಪಾಯಿ ಗಡಿ ತಲುಪಿ ಹೊಸ ಇತಿಹಾಸ ಬರೆದಿತ್ತು. ಬಂಗಾರಕ್ಕಿಂತ ವೇಗವಾಗಿ ಬೆಳ್ಳಿ ಬೆಳೆಯುತ್ತಿದೆ ಎಂದು ಎಲ್ಲರೂ ನಂಬಿದ್ದರು. ಆದರೆ, ಇಂದು ಬೆಳ್ಳಂಬೆಳಗ್ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಿಂದ ಬಂದ ಆ ಒಂದು ಸುದ್ದಿ ಭಾರತದ ಮಾರುಕಟ್ಟೆಯನ್ನು ನಡುಗಿಸಿಬಿಟ್ಟಿದೆ. ಬೆಳ್ಳಿ ಬೆಲೆ ಸರಿಸುಮಾರು ಶೇ. 30ರಷ್ಟು ಕುಸಿತ ಕಂಡಿದೆ! ಅಂದರೆ, ಭಾರತದ MCX ಮಾರುಕಟ್ಟೆಯಲ್ಲಿ ಒಂದೇ ದಿನದಲ್ಲಿ ಲಕ್ಷಕ್ಕೂ ಅಧಿಕ ರೂಪಾಯಿ ಇಳಿಕೆಯಾಗಿದೆ. ಇದು ಕೇವಲ ನಷ್ಟವಲ್ಲ, ಮಧ್ಯಮ ವರ್ಗದ ಜನರ ಕನಸಿನ ಮೇಲಾದ ಕೊಡಲಿ ಪೆಟ್ಟು!”
“ಯೋಚನೆ ಮಾಡಿ ನೋಡಿ… ಮಗಳ ಮದುವೆಗೆ ಅಂತ ಉಳಿಸಿದ್ದ ಹಣವನ್ನು ಬೆಳ್ಳಿಯ ಮೇಲೆ ಹಾಕಿದ್ದ ತಂದೆಯ ಪರಿಸ್ಥಿತಿ ಏನಾಗಿರಬೇಡ? ಬೆಳ್ಳಿ ಬೆಲೆ ಕೆಜಿಗೆ 5 ಲಕ್ಷ ಆಗುತ್ತೆ ಅನ್ನೋ ಭರವಸೆಯಲ್ಲಿ ಸಾಲ ಮಾಡಿ ಹೂಡಿಕೆ ಮಾಡಿದವರ ಕಥೆಯೇನು?. ಯಾರು ಕೆಜಿಗೆ 3.5 ಲಕ್ಷಕ್ಕಿಂತ ಅಧಿಕ ಹಣ ಕೊಟ್ಟು ಬೆಳ್ಳಿ ಖರೀದಿಸಿದ್ದರೋ, ಅವರಿಗೆ ಇವತ್ತು ಒಂದೇ ದಿನದಲ್ಲಿ 80 ಸಾವಿರದಿಂದ 1 ಲಕ್ಷ ರೂಪಾಯಿ ನಷ್ಟವಾಗಿದೆ. ಚಿನ್ನದ ಬೆಲೆ ಗಗನಕ್ಕೇರಿತು ಅಂತ ಬೆಳ್ಳಿಯ ಮೊರೆ ಹೋದವರಿಗೆ ಈಗ ಅತ್ತ ಕಡೆ ಚಿನ್ನವೂ ಇಲ್ಲ, ಇತ್ತ ಕೈಲಿದ್ದ ಬೆಳ್ಳಿಯೂ ಕರಗಿ ನೀರಾಗಿದೆ.”
“ಅಸಲಿಗೆ ಈ ಭೂಕಂಪಕ್ಕೆ ಕಾರಣವೇನು? ತಜ್ಞರು ಮೂರು ಮುಖ್ಯ ಕಾರಣಗಳನ್ನು ನೀಡುತ್ತಿದ್ದಾರೆ. ಮೊದಲ ಕಾರಣ, ಅಮೆರಿಕದ ಫೆಡರಲ್ ರಿಸರ್ವ್ ನಿರ್ಧಾರ.. ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿ ದರಗಳಲ್ಲಿ ಬದಲಾವಣೆ ಮಾಡಿದ್ದು, ಹೂಡಿಕೆದಾರರು ಲೋಹದ ಮೇಲಿನ ಹೂಡಿಕೆಯನ್ನು ಹಿಂಪಡೆಯುತ್ತಿದ್ದಾರೆ.. ಎರಡನೇ ಕಾರಣ, ಡಾಲರ್ ಮೌಲ್ಯದ ಏರಿಕೆ.. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಬಲಗೊಳ್ಳುತ್ತಿದ್ದಂತೆ, ಬೆಳ್ಳಿ ಮತ್ತು ಚಿನ್ನದ ಮೌಲ್ಯ ಕುಸಿಯುವುದು ಸಹಜ.. ಈಗ ಅದೇ ಆಗಿದೆ.. ಮೂರನೇ ಕಾರಣ ಬೇಡಿಕೆಯಲ್ಲಿ ಕುಸಿತ.. ಕೈಗಾರಿಕಾ ಕ್ಷೇತ್ರದಲ್ಲಿ ಬೆಳ್ಳಿಯ ಬಳಕೆಗೆ ಬಂದ ಸಣ್ಣ ಹಿನ್ನಡೆ ಕೂಡ ಈ ದಿಢೀರ್ ಕುಸಿತಕ್ಕೆ ಕಾರಣವಾಗಿದೆ ಅಂತ ತಜ್ಞರು ಹೇಳುತ್ತಿದ್ದಾರೆ.
“ಆದರೆ, ನಾಣ್ಯಕ್ಕೆ ಎರಡು ಮುಖಗಳಿರುವಂತೆ, ಹೂಡಿಕೆದಾರರಿಗೆ ನಷ್ಟವಾದರೆ ಆಭರಣ ಪ್ರಿಯರಿಗೆ ಇದು ಹಬ್ಬದ ಸುದ್ದಿ! ಮನೆಯಲ್ಲಿ ಮದುವೆ, ಮುಂಜಿ ಅಥವಾ ಯಾವುದಾದರೂ ಶುಭ ಕಾರ್ಯವಿಟ್ಟುಕೊಂಡು ಬೆಳ್ಳಿ ಬೆಲೆ ಇಳಿಕೆಗಾಗಿ ಕಾಯುತ್ತಿದ್ದವರಿಗೆ ಇದು ಬಂಪರ್ ಸಮಯ. ಇಷ್ಟು ದಿನ ದುಬಾರಿ ಅಂತ ದೂರ ನಿಂತವರು ಈಗ ಅಂಗಡಿಗಳ ಮುಂದೆ ಸಾಲುಗಟ್ಟುತ್ತಿದ್ದಾರೆ. ಬೆಳ್ಳಿಯ ದೀಪಗಳು, ಕಾಲುಂಗುರಗಳು ಈಗ ಅಗ್ಗದ ದರದಲ್ಲಿ ಸಿಗುತ್ತಿವೆ.”
ಹಾಗಂತ ಈಗಲೇ ಹೋಗಿ ಎಲ್ಲ ಹಣವನ್ನು ಬೆಳ್ಳಿಯ ಮೇಲೆ ಸುರಿಯಬೇಡಿ. ತಜ್ಞರು ಒಂದು ಮಹತ್ವದ ಎಚ್ಚರಿಕೆ ನೀಡುತ್ತಿದ್ದಾರೆ.. ಮಾರುಕಟ್ಟೆ ಈಗ ಅತ್ಯಂತ ಅಸ್ಥಿರವಾಗಿದೆ. ಈಗ ಇಳಿಕೆಯಾಗಿದೆ ಎಂದು ಒಟ್ಟಿಗೆ ದೊಡ್ಡ ಹೂಡಿಕೆ ಮಾಡಬೇಡಿ. ಬೆಲೆ ಇನ್ನೂ ಕುಸಿಯುವ ಸಾಧ್ಯತೆಯಿದೆ ಅಥವಾ ಸ್ಥಿರಗೊಳ್ಳಲು ಸಮಯ ಬೇಕು.ಹಂತ ಹಂತವಾಗಿ ಹೂಡಿಕೆ ಮಾಡುವುದು ಜಾಣತನದ ಲಕ್ಷಣ.


