ವಿಜಯನಗರ/ಬೆಂಗಳೂರು: ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆ, ತಾಯಿ ಹಾಗೂ ಸಹೋದರಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿ ಬೆಂಗಳೂರಿಗೆ ಪರಾರಿಯಾಗಿದ್ದ ಆರೋಪಿ, ಪೊಲೀಸರ ಅತಿಥಿಯಾಗಿದ್ದಾನೆ.
ಕೊಟ್ಟೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಅಕ್ಷಯ್ ಕುಮಾರ್ ಎಂಬಾತ ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಳನ್ನು ಹತ್ಯೆಗೈದ ಆರೋಪಿ. ಈ ಕುಟುಂಬವು ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯವರಾಗಿದ್ದು, ಕೆಲಸದ ನಿಮಿತ್ತ ಕೊಟ್ಟೂರಿನಲ್ಲಿ ನೆಲೆಸಿದ್ದರು.
ಸಹೋದರಿ ಅಮೃತಾಳ ಪ್ರೇಮ ವಿಚಾರ ಕೊಲೆ ಕಾರಣ ಎನ್ನಲಾಗಿದೆ. ಸಹೋದರಿಯ ಪ್ರೀತಿಯ ವಿಚಾರಕ್ಕೆ ಮನೆಯಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಅಮೃತಾಳ ಪ್ರೀತಿಗೆ ತಂದೆ-ತಾಯಿ ಬೆಂಬಲ ನೀಡುತ್ತಿದ್ದರು ಎಂಬುದು ಅಕ್ಷಯ್‌ನ ಕೋಪಕ್ಕೆ ಕಾರಣವಾಗಿತ್ತು. ಇದೇ ಆಕ್ರೋಶದಲ್ಲಿ ಅಕ್ಷಯ್ ಮೂವರನ್ನು ಕೊಲೆ ಮಾಡಿ, ಶವಗಳನ್ನು ಮನೆಯಲ್ಲೇ ಹೂತು ಹಾಕಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆ ಮಾಡಿದ ನಂತರ ಆರೋಪಿ ಅಕ್ಷಯ್ ಬೆಂಗಳೂರಿಗೆ ಪರಾರಿಯಾಗಿದ್ದ. “ನನ್ನ ತಂದೆ-ತಾಯಿ, ತಂಗಿ ನಾಪತ್ತೆಯಾಗಿದ್ದಾರೆ” ಎಂದು ದೂರು ನೀಡಲು ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಗೆ ಇಂದು ಮಧ್ಯಾಹ್ನ ತೆರಳಿದ್ದ. ಆದರೆ ಪೊಲೀಸರ ಪ್ರಶ್ನೆಗಳಿಗೆ ಅಸ್ಪಷ್ಟ ಹಾಗೂ ಗಲಿಬಿಲಿಯ ಉತ್ತರ ನೀಡುತ್ತಿದ್ದ ಈತನ ವರ್ತನೆ ಕಂಡು ಪೊಲೀಸರಿಗೆ ಅನುಮಾನ ಮೂಡಿದೆ. ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತಾನೇ ಮೂವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.


