ವಿವಾಹೇತರ ಸಂಬಂಧಗಳನ್ನು ಕೇವಲ ವ್ಯಕ್ತಿತ್ವದ ದೌರ್ಬಲ್ಯ ಅಥವಾ ನೈತಿಕ ಕುಸಿತವೆಂದು ನೋಡುವುದು ಮೇಲ್ನೋಟದ ವಿಶ್ಲೇಷಣೆ ಮಾತ್ರ. ವಾಸ್ತವದಲ್ಲಿ, ಇಂತಹ ಸಂಬಂಧಗಳ ಹಿಂದೆ ಆಳವಾದ ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಕಾರಣಗಳು ಕೆಲಸ ಮಾಡುತ್ತವೆ. ದಾಂಪತ್ಯ ಜೀವನದಲ್ಲಿ ಭಾವನಾತ್ಮಕ ಸಂಪರ್ಕದ ಕೊರತೆ, ಪರಸ್ಪರ ಸಂವಹನದ ಅಭಾವ, ನಿರ್ಲಕ್ಷ್ಯ, ಒತ್ತಡಭರಿತ ಜೀವನಶೈಲಿ ಅಥವಾ ಸ್ವೀಕಾರ ಮತ್ತು ಗೌರವದ ಅಗತ್ಯ ಪೂರೈಸದಿರುವುದು ವ್ಯಕ್ತಿಯನ್ನು ಹೊರಗಿನ ಸಂಬಂಧಗಳತ್ತ ತಳ್ಳಬಹುದು. ಜೊತೆಗೆ ಸಮಾಜದ ಬದಲಾದ ಮೌಲ್ಯಗಳು, ಡಿಜಿಟಲ್ ಸಂಪರ್ಕಗಳ ಸುಲಭ ಲಭ್ಯತೆ ಮತ್ತು ವೈಯಕ್ತಿಕ ಅಸಮಾಧಾನವೂ ಈ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ವಿವಾಹೇತರ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ತೀರ್ಪು ನೀಡುವುದಕ್ಕಿಂತಲೂ, ಅದರ ಹಿಂದೆ ಇರುವ ಮಾನವೀಯ ಮತ್ತು ಸಾಮಾಜಿಕ ಅಂಶಗಳನ್ನು ಆಳವಾಗಿ ವಿಶ್ಲೇಷಿಸುವ ಅಗತ್ಯವಿದೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಮಾಣ ಗಮನಾರ್ಹವಾಗಿ ಹೆಚ್ಚುತ್ತಿದೆ. ಇದರಲ್ಲಿ ಅರೆಂಜ್ ಮ್ಯಾರೇಜ್ ಮಾತ್ರವಲ್ಲ, ಲವ್ ಮ್ಯಾರೇಜ್ ಮಾಡಿದ ಜೋಡಿಗಳೂ ಸೇರಿರುವುದು ಗಮನ ಸೆಳೆಯುವ ಸಂಗತಿ. ಸಾಮಾನ್ಯವಾಗಿ ಪ್ರೀತಿ ಇದ್ದಲ್ಲಿ ದ್ರೋಹಕ್ಕೆ ಅವಕಾಶವಿಲ್ಲ ಎಂಬ ನಂಬಿಕೆ ನಮ್ಮ ಸಮಾಜದಲ್ಲಿ ಬಲವಾಗಿ ಇದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಈ ನಂಬಿಕೆಯನ್ನು ಪ್ರಶ್ನಿಸುವಂತಿವೆ. ತಮ್ಮ ಪ್ರೀತಿಪಾತ್ರರನ್ನು ಆಯ್ಕೆ ಮಾಡಿಕೊಂಡು ಮದುವೆಯಾದ ನಂತರವೂ ಕೆಲವರು ವಿವಾಹೇತರ ಸಂಬಂಧಗಳಲ್ಲಿ ತೊಡಗಿಕೊಳ್ಳುತ್ತಿರುವುದು ವಾಸ್ತವವಾಗಿದೆ. ಇದಕ್ಕೆ ಕೇವಲ ಪ್ರೀತಿಯ ಕೊರತೆ ಮಾತ್ರ ಕಾರಣವಲ್ಲ; ಪರಸ್ಪರ ಅರ್ಥಮಾಡಿಕೊಳ್ಳುವಿಕೆಯ ಅಭಾವ, ಸಂವಹನದ ಕೊರತೆ, ನಿರೀಕ್ಷೆಗಳ ವ್ಯತ್ಯಾಸ, ವೈಯಕ್ತಿಕ ಅಸಮಾಧಾನ ಮತ್ತು ಜೀವನದ ಒತ್ತಡಗಳೂ ಕಾರಣವಾಗುತ್ತವೆ. ಹೀಗಾಗಿ ವಿವಾಹದ ಯಶಸ್ಸು ಮದುವೆಯ ರೀತಿಗಿಂತಲೂ, ದಾಂಪತ್ಯದಲ್ಲಿ ಇರುವ ಪರಸ್ಪರ ಗೌರವ, ನಂಬಿಕೆ ಮತ್ತು ಭಾವನಾತ್ಮಕ ಬಾಂಧವ್ಯದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ವಿವಾಹೇತರ ಸಂಬಂಧಗಳು ತಪ್ಪೆಂದು ಬಹುತೇಕರು ಅಭಿಪ್ರಾಯಪಡುತ್ತಾರೆ. ಆದರೆ ಕೇವಲ ಅದನ್ನು ತಪ್ಪೆಂದು ಹೇಳುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ? ಉತ್ತರ ಸ್ಪಷ್ಟವಾಗಿ ‘ಇಲ್ಲ’. ಹಾಗಾದರೆ ಇಂತಹ ಸಂಬಂಧಗಳು ಏಕೆ ಉಂಟಾಗುತ್ತವೆ ಎಂಬುದನ್ನು ನಾವು ಸಮಾಜವಾಗಿ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ವಿವಾಹೇತರ ಸಂಬಂಧಗಳನ್ನು ಕೇವಲ ವ್ಯಕ್ತಿತ್ವದ ದೌರ್ಬಲ್ಯ ಅಥವಾ ನೈತಿಕತೆಯ ಪ್ರಶ್ನೆಯಾಗಿ ನೋಡೋದು ಮೇಲ್ನೋಟದ ದೃಷ್ಟಿಕೋನ ಮಾತ್ರ. ಅದರ ಹಿಂದೆ ಆಳವಾದ ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಕಾರಣಗಳು ಅಡಗಿವೆ. ಜನರು ಇಂತಹ ಸಂಬಂಧಗಳತ್ತ ಏಕೆ ಆಕರ್ಷಿತರಾಗುತ್ತಾರೆ, ದಾಂಪತ್ಯ ಜೀವನದಲ್ಲಿ ಯಾವ ಅಂಶಗಳು ಈ ನಿರ್ಧಾರಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದನ್ನು ವೈದ್ಯಕೀಯ ಹಾಗೂ ಮನಶಾಸ್ತ್ರೀಯ ದೃಷ್ಟಿಯಿಂದ ವಿವರವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಮನಶಾಸ್ತ್ರಜ್ಞರ ಪ್ರಕಾರ ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ಕಾರಣಗಳಿಗಾಗಿ ಪ್ರಣಯ ಸಂಬಂಧಗಳಿಗೆ ಪ್ರವೇಶಿಸುತ್ತಾರೆ. ಅಂದರೆ ಅವರ ಮಾತನ್ನು ಕೇಳಿಸಿಕೊಳ್ಳದಿರುವುದು, ಮೆಚ್ಚುಗೆಯ ಕೊರತೆ, ಭಾವನಾತ್ಮಕ ಒಂಟಿತನ, ತಮ್ಮ ಗುರುತನ್ನು ಕಳೆದುಕೊಳ್ಳುವ ಭಾವನೆ. ಹಾಗೆಯೇ ಪುರುಷರ ವಿಷಯದಲ್ಲಿ ಕಾರಣಗಳು ವಿಭಿನ್ನವಾಗಿರಬಹುದು. ಉದಾಹರಣೆಗೆ ಗಮನದ ಅವಶ್ಯಕತೆ, ತನ್ನನ್ನು ತಾನು ಸಾಬೀತುಪಡಿಸುವ ಬಯಕೆ, ಭಾವನಾತ್ಮಕ ವಿಷಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗದ ಅಭ್ಯಾಸ, ಮದುವೆಯನ್ನು ಜವಾಬ್ದಾರಿಯಾಗಿ ಪರಿಗಣಿಸುವುದು. ಹಾಗಾಗಿ ಪುರುಷರು ಇದನ್ನು ಕೇವಲ ದೈಹಿಕ ಕಾರಣಗಳಿಗಾಗಿ ಮಾಡುತ್ತಾರೆ ಎಂದು ಭಾವಿಸುವುದು ತಪ್ಪು. ಭಾವನಾತ್ಮಕ ಅತೃಪ್ತಿಯೂ ಇಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.

ಪ್ರೇಮ ವಿವಾಹಗಳಲ್ಲಿ ಸಾಮಾನ್ಯವಾಗಿ ಸಂಗಾತಿಯು ಏನನ್ನೂ ಹೇಳದೆ ಪ್ರತಿಯೊಂದು ಭಾವನೆಯನ್ನು ಸ್ವಯಂ ಅರ್ಥಮಾಡಿಕೊಳ್ಳಬೇಕು ಎಂಬ ನಿರೀಕ್ಷೆ ಇರುತ್ತದೆ ಎಂದು ಮನಶಾಸ್ತ್ರಜ್ಞರು ವಿವರಿಸುತ್ತಾರೆ. ಆದರೆ ಕಾಲಕ್ರಮೇಣ ವೃತ್ತಿ, ಕುಟುಂಬದ ಜವಾಬ್ದಾರಿಗಳು, ಮಕ್ಕಳು ಮತ್ತು ದಿನನಿತ್ಯದ ಒತ್ತಡಗಳು ಹೆಚ್ಚಾದಂತೆ ದಾಂಪತ್ಯದಲ್ಲಿ ಸಂವಹನ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದೇ ಸಂದರ್ಭದಲ್ಲಿ ಭಾವನಾತ್ಮಕ ಅಂತರವು ಸದ್ದಿಲ್ಲದೆ ಮೂಡಿಬರುತ್ತದೆ. ಒಬ್ಬ ವ್ಯಕ್ತಿಗೆ ತನ್ನ ಭಾವನೆಗಳನ್ನು ಕೇಳಿಸಿಕೊಳ್ಳಲಾಗುತ್ತಿಲ್ಲ, ಅರ್ಥಮಾಡಿಕೊಳ್ಳಲಾಗುತ್ತಿಲ್ಲ ಅಥವಾ ಮೆಚ್ಚುಗೆಯ ಕೊರತೆ ಇದೆ ಎಂಬ ಅನುಭವ ಬಂದಾಗ, ಅವರು ಅನಿವಾರ್ಯವಾಗಿ ಹೊರಗಿನ ಭಾವನಾತ್ಮಕ ಸಂಪರ್ಕವನ್ನು ಹುಡುಕಲು ಪ್ರಾರಂಭಿಸುತ್ತಾರೆ. ಹೀಗೆ ನಿಧಾನವಾಗಿ ಉಂಟಾಗುವ ಈ ಅಂತರವೇ ವಿವಾಹೇತರ ಸಂಬಂಧಗಳಿಗೆ ದಾರಿ ಮಾಡಿಕೊಡುವ ಪ್ರಮುಖ ಕಾರಣವಾಗಬಹುದು.

ಪರಿಹಾರಗಳತ್ತ ಗಮನಹರಿಸುವುದೇ ಇಂತಹ ಸಮಸ್ಯೆಗಳನ್ನು ತಡೆಯುವ ಮೊದಲ ಹೆಜ್ಜೆ. ದಾಂಪತ್ಯದಲ್ಲಿ ಮುಕ್ತ ಮತ್ತು ಸುರಕ್ಷಿತ ಸಂವಹನ ಇರಬೇಕು; ಮನಸ್ಸಿನ ಮಾತುಗಳನ್ನು ಭಯವಿಲ್ಲದೆ ಹೇಳಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಜೊತೆಗೆ ಪರಸ್ಪರ ಭಾವನಾತ್ಮಕ ಅಗತ್ಯತೆಗಳನ್ನು ಗುರುತಿಸಿ, ಗೌರವಿಸುವುದು ಅತ್ಯಂತ ಅಗತ್ಯ. ದಿನನಿತ್ಯದ ಓಡಾಟದಲ್ಲಿ ಸಂಗಾತಿಯನ್ನು ಹಗುರವಾಗಿ ಪರಿಗಣಿಸದೆ, ಅವರ ಭಾವನೆಗಳಿಗೆ ಮೌಲ್ಯ ನೀಡಬೇಕು. ಸಂಬಂಧವನ್ನು ಕೇವಲ ಉಳಿಸಿಕೊಳ್ಳುವುದಷ್ಟೇ ಅಲ್ಲ, ಅದನ್ನು ನಿರಂತರವಾಗಿ ಬಲಪಡಿಸಲು ಮತ್ತು ಸುಧಾರಿಸಲು ಜಾಗೃತ ಪ್ರಯತ್ನವೂ ಅಗತ್ಯ. ಸಮಸ್ಯೆಗಳು ಗಂಭೀರವಾಗುವ ಮೊದಲು ಸಮಯಕ್ಕೆ ಸರಿಯಾಗಿ ಸಮಾಲೋಚನೆ ಅಥವಾ ತಜ್ಞರ ಮಾರ್ಗದರ್ಶನ ಪಡೆಯುವುದು ದಾಂಪತ್ಯವನ್ನು ಉಳಿಸಿಕೊಳ್ಳಲು ಸಹಾಯಕವಾಗಬಹುದು.


