ತ್ರಿಪುರದಲ್ಲಿ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ. ಅಕ್ರಮ ಡ್ರಗ್ಸ್ ಉತ್ಪಾದನೆ ಹಾಗೂ ಸಾಗಣೆ ವಿರುದ್ಧ ಭದ್ರತಾ ಪಡೆಗಳು ಕಠಿಣ ಕ್ರಮ ಕೈಗೊಂಡಿದ್ದಾರೆ. ತ್ರಿಪುರದ ಸೋನಮುರಾ ಉಪವಿಭಾಗದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಬೆಳೆದ 1.80 ಲಕ್ಷ ಗಾಂಜಾ ಗಿಡಗಳನ್ನು ನಾಶಪಡಿಸಿದ್ದಾರೆ.
ಈ ಗಾಂಜಾ ಸಸಿಗಳು ಸುಮಾರು 65 ಎಕರೆ ಅರಣ್ಯಭೂಮಿಯಲ್ಲಿ ಬೆಳೆದಿದ್ದು, 27 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಮಲಾನಗರ, ಕೃಷ್ಣಡೋಲಾ, ದುಲುಂಗ ಮತ್ತು ಬಿಜೋಯ್ ನಗರಗಳ ಅರಣ್ಯ ಪ್ರದೇಶಗಳಿಗೆ ಭದ್ರತಾ ಪಡೆಗಳು ದಾಳಿ ನಡೆಸಿ ಎಲ್ಲ ಗಾಂಜಾ ಸಸಿಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ 81ನೇ ಬೆಟಾಲಿಯನ್ ಬಿಎಸ್‌ಎಫ್, 5ನೇ, 9ನೇ, 11ನೇ ಮತ್ತು 14ನೇ ಬೆಟಾಲಿಯನ್ ಟಿಎಸ್‌ಆರ್, 14ನೇ ಬೆಟಾಲಿಯನ್ ಮಹಿಳಾ ಟಿಎಸ್‌ಆರ್, 35ನೇ ಬೆಟಾಲಿಯನ್ ಅಸ್ಸಾಂ ರೈಫಲ್ಸ್, ಮತ್ತು ಸೋನಮುರಾ ಪೊಲೀಸ್ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.


