ದೊಡ್ಡಬಳ್ಳಾಪುರ: ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಮೂವರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಮಹಿಳೆಯೊಬ್ಬರ ಅಸಲಿ ಮುಖ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬ ಮಹಿಳೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಆಕೆಯ ಮೊದಲ ಹಾಗೂ ಎರಡನೇ ಪತಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಣವಿರುವವರನ್ನೇ ಗುರಿಯಾಗಿಸಿಕೊಂಡು ಪ್ರೀತಿಯ ನಾಟಕವಾಡಿ ಮದುವೆಯಾಗುತ್ತಿದ್ದ ಸುಧಾರಾಣಿ, ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಗೆ ಇಬ್ಬರು ಮಕ್ಕಳಿದ್ದರು. ಆದರೆ, ಪತಿ ಕಾರು ಮತ್ತು ಬುಲೆಟ್ ಬೈಕ್ ಓಡಿಸಲು ಬರಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಕ್ಕಳನ್ನೂ ಲೆಕ್ಕಿಸದೆ ಪತಿಯನ್ನು ಬಿಟ್ಟು ಹೋಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಬಳಿಕ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬುವವರ ಪರಿಚಯ ಮಾಡಿಕೊಂಡ ಸುಧಾರಾಣಿ, ತನ್ನ ಗಂಡ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿ ಮದುವೆಯಾಗಿದ್ದಾಳೆ. ಒಂದು ವರ್ಷಗಳ ಕಾಲ ಆತನೊಂದಿಗೆ ಸಂಸಾರ ನಡೆಸಿದ ಆಕೆ, ವಿವಿಧ ಕಾರಣಗಳನ್ನು ನೀಡಿ 15 ರಿಂದ 20 ಲಕ್ಷ ರೂ. ಹಣ
ಪಂಗನಾಮ ಹಾಕಿದ್ದಾಳೆ.
ಅನಂತಮೂರ್ತಿಯಿಂದ ಹಣ ಪಡೆದು ಆತನನ್ನೂ ತೊರೆದ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ತಿಳಿದು ಬಂದಿದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಇಬ್ಬರು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೇವಲ ಹಣಕ್ಕಾಗಿ ಶ್ರೀಮಂತರನ್ನೂ, ಅಮಾಯಕ ಪುರುಷರನ್ನೂ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ ಎಂದು ಸಂತ್ರಸ್ತರು ಆರೋಪಿಸಿದ್ದು, ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


